ಬೆಳಗಾವಿ: ತಾಲೂಕಿನ ಬೋಡಕ್ಯಾನಟ್ಟಿ ಗ್ರಾಮದ ರೈತ ಶಿವಲಿಂಗಪ್ಪ ಸಾತಪ್ಪ ಹುದ್ದಾರ ಇವರ ಪುತ್ರ ರಾಜು ಹುದ್ದಾರ್ ಮೀನು ಸಾಕಾಣಿಕೆಯಲ್ಲಿ ಯಶಸ್ಸು ಕಂಡಿದ್ದಾರೆ. ಇವರ ಸಾಧನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮನ್ ಕಿ ಬಾತ್ನಲ್ಲಿ ಉಲ್ಲೇಖಿಸಿದ್ದಾರೆ.
ಬೋಡಕ್ಯಾನಟ್ಟಿ ಎನ್ನುವ ಪುಟ್ಟ ಗ್ರಾಮದಲ್ಲಿ ಶಿವಲಿಂಗಪ್ಪ ತಮ್ಮ ಪುತ್ರ ರಾಜು ಅವರ ನೆರವಿನಿಂದ ಒಂದು ಎಕರೆಯಲ್ಲಿ ಕೃಷಿ ಹೊಂಡದಲ್ಲಿ ಬಯೋಪ್ಲಾಕ್ ತಂತ್ರಜ್ಞಾನ ಬಳಸಿ ಕುಚ್ಚು(ಮರಲ್) ಮೀನು ಸಾಕಾಣಿಕೆ ಮಾಡಿ, ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ ಅವರು, ರಾಜು ಹುದ್ದಾರ ಅವರ ಯಶಸ್ವಿ ಮೀನುಗಾರಿಕೆಯನ್ನು ದೇಶಕ್ಕೆ ಪರಿಚಯಿಸಿದರು. ಈ ರೀತಿ ಎಲ್ಲ ರೈತರು ವಿಭಿನ್ನವಾಗಿ ಪ್ರಯತ್ನಿಸಿದರೆ ಆರ್ಥಿಕವಾಗಿ ಸದೃಢರಾಗಬಹುದು. ಅಲ್ಲದೇ, ದೇಶದ ಆರ್ಥಿಕ ಶಕ್ತಿಗೂ ದೊಡ್ಡ ಕೊಡುಗೆ ನೀಡಬಹುದು ಎಂದು ಕರೆ ಕೊಟ್ಟಿದ್ದಾರೆ.
ಶಿವಲಿಂಗಪ್ಪ ಸಾತಪ್ಪ ಹುದ್ದಾರ ಅವರು ಸಾಂಪ್ರದಾಯಿಕ ಕೃಷಿಯ ಬದಲಿಗೆ ಬೇರೆಯದೇ ಮಾರ್ಗವನ್ನು ಆಯ್ದುಕೊಂಡಿದ್ದಾರೆ. ಅವರು ಮೀನು ಸಾಕಾಣಿಕೆಯಲ್ಲಿ ಯಶಸ್ಸು ಕಂಡಿದ್ದಾರೆ. ಇದಕ್ಕಾಗಿ ತರಬೇತಿಯನ್ನೂ ಪಡೆದಿದ್ದಾರೆ. ಇದರಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ. ನಮ್ಮ ಆರ್ಥಿಕತೆಯನ್ನು ಬಲಿಷ್ಠಗೊಳಿಸಲು ಇವರೆಲ್ಲರ ಪ್ರಯತ್ನ ಪ್ರಶಂಸನೀಯ. ಸಮಾಜದಲ್ಲಿನ ಸಣ್ಣ ಸಣ್ಣ ಪ್ರಯತ್ನವೂ ಕೂಡ ದೊಡ್ಡ ಬದಲಾವಣೆ ತರುತ್ತದೆ ಎಂದು ಮೋದಿ ಪ್ರಶಂಸಿಸಿದ್ದಾರೆ.
ಇದನ್ನೂ ಓದಿ : ಘೋರ ದುರಂತ : ಕೃಷಿ ಹೊಂಡದಲ್ಲಿ ಈಜಲು ಹೋದ ನಾಲ್ವರು ಮಕ್ಕಳು ಜಲಸಮಾಧಿ!



















