ಬೆಂಗಳೂರು: ಜೈಲಿನೊಳಗೆ ಐಷಾರಾಮಿ ಸೌಲಭ್ಯಗಳಿವೆ ಎಂದು ತೋರಿಸಿ ಡಿಜಿಪಿ ಅಲೋಕ್ ಕುಮಾರ್ ಅವರೇ ನಮಗೆ ಮೊಬೈಲ್ ಕೊಟ್ಟಿದ್ದಾರೆಂದು ಕಿಡಿಗೇಡಿಗಳು ವಿಡಿಯೋ ವೈರಲ್ ಮಾಡಿರುವ ಘಟನೆ ಸೆಂಟ್ರಲ್ ಜೈಲಲ್ಲಿ ನಡೆದಿದೆ.
ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದಲೇ ಈ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಹರಿಬಿಡಲಾಗಿದೆ ಎಂದು ತಿಳಿದುಬಂದಿದೆ. ವಿಡಿಯೋದಲ್ಲಿ ಜೈಲಿನೊಳಗೆ ಮೊಬೈಲ್, ಟಿವಿ ಹಾಗೂ ನೆಟ್‌ಫ್ಲಿಕ್ಸ್ ಮುಂತಾದ ಸೌಲಭ್ಯಗಳಿವೆ ಎಂದು ಬಿಂಬಿಸಲಾಗಿತ್ತು. ಅಲ್ಲದೇ “ನಾಳೆ ಐಪಿಎಲ್ ಮ್ಯಾಚ್ ಇದೆ, ಈ ಸಲ ಕಪ್ ನಮ್ದೆ” ಎಂದು ಹೇಳುತ್ತಾ ಐಷಾರಾಮಿ ಜೀವನ ನಡೆಸುತ್ತಿರುವಂತೆ ತೋರಿಸಲಾಗಿತ್ತು.
ಪ್ರಾಥಮಿಕ ತನಿಖೆಯಲ್ಲಿ, ಈ ಕೃತ್ಯಕ್ಕೆ ದರ್ಶನ್, ಅಭಿಷೇಕ್ ಹಾಗೂ ಎಂಡ್ರೋಸ್ ಎಂಬ ಕೈದಿಗಳು ಕಾರಣರಾಗಿರುವುದು ಬಹಿರಂಗವಾಗಿದೆ. ಹೆಣ್ಣೂರು ಬಂಡೆ ಬಳಿ ನಡೆದ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್ ಮತ್ತು ಅಭಿಷೇಕ್, ಎಂಡ್ರೋಸ್‌ನಿಂದ ಈ ವಿಡಿಯೋ ಮಾಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಡಿಯೋ ವೈರಲ್ ಆದ ಬಳಿಕ ಜೈಲಿನಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು, 9ನೇ ಬ್ಯಾರಕ್‌ನಲ್ಲಿ ಡ್ರೈನೇಜ್ ಚಾನಲ್ ಬಳಿ ಮೊಬೈಲ್ ಪತ್ತೆಹಚ್ಚಿದ್ದಾರೆ. ಬಳಸಿದ ಹಾಲಿನ ಪ್ಯಾಕೆಟ್‌ಗಳಲ್ಲಿ ಸುತ್ತಿ ಅದನ್ನು ಬಚ್ಚಿಡಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಆರೋಪದಲ್ಲಿ ಮೂವರು ವಾರ್ಡರ್‌ಗಳನ್ನು ಅಮಾನತು ಮಾಡಿ ಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದಾರೆ. ಶಿವಾನಂದ ಕರ್ಲಬಟ್ಟಿ, ನಿರಂಜನ ಎ. ಕಾಮತ್ ಹಾಗೂ ಹನುಮಂತಪ್ಪ ಹಡಪದ ಅಮಾನತುಗೊಂಡಿದ್ದಾರೆ. ಜೊತೆಗೆ ಜೈಲರ್ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಡಿಜಿಪಿ ಅಲೋಕ್ ಕುಮಾರ್, “ಆರೋಪಿಗಳ ಬಳಿ ಮೊಬೈಲ್ ಸಿಕ್ಕ ಹಿನ್ನೆಲೆಯಲ್ಲಿ ಅವರನ್ನು ಕ್ವಾರಂಟೈನ್ ಸೆಲ್‌ಗೆ ಹಾಕಲಾಗಿತ್ತು. ಕೈದಿಗಳನ್ನು ಅಕ್ಷರಕ್ರಮದ ಆಧಾರದ ಮೇಲೆ ಬೇರೆ ಬ್ಯಾರಕ್‌ಗಳಿಗೆ ಶಿಫ್ಟ್ ಮಾಡಲಾಗುತ್ತಿತ್ತು. ಇದಕ್ಕೆ ವಿರೋಧವಾಗಿ ಈ ರೀತಿಯ ಕೃತ್ಯ ಎಸಗಿದ್ದಾರೆ. ಟಾಯ್ಲೆಟ್ ಚೇಂಬರ್‌ನಲ್ಲಿ ಮೊಬೈಲ್ ಇಟ್ಟು ಬಳಸಿರುವುದು ಪತ್ತೆಯಾಗಿದೆ” ಎಂದು ತಿಳಿಸಿದ್ದಾರೆ.
ಹಾಗೆಯೇ, ಜೈಲಿನೊಳಗೆ ಮೊಬೈಲ್ ಬಳಕೆಗೆ ಬಳಸಲಾಗುತ್ತಿರುವ ಫ್ರೀಕ್ವೆನ್ಸಿ ಕುರಿತು ತನಿಖೆ ನಡೆಯುತ್ತಿದ್ದು, ಸಂಬಂಧಿಸಿದ ಟೆಲಿಕಾಂ ಸಂಸ್ಥೆಯೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆ, ಈ ವಿಡಿಯೋ ನಿಜವಾಗಿಯೇ ಜೈಲಿನೊಳಗೆ ಚಿತ್ರೀಕರಿಸಲ್ಪಟ್ಟಿದೆಯೇ ಅಥವಾ ಬೇರೆಡೆ ಸೆಟ್‌ಅಪ್ ಮಾಡಿ ಮಾಡಲಾಗಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಗ್ರಾಹಕರ ಸೋಗಿನಲ್ಲಿ ಬಂದು ನೋಡು ನೋಡುತ್ತಲೇ ಚಿನ್ನದ ಸರ ಎಗರಿಸಿದ ಖದೀಮ


















