ಗದಗ: ಸುಟ್ಟ ಸ್ಥಿತಿಯಲ್ಲಿ ಯುವಕನೊರ್ವನ ಶವ ಪತ್ತೆಯಾಗಿರುವ ಘಟನೆ ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ನಡೆದಿದೆ. ಚಂದ್ರು ಕುರಿ (27) ಮೃತ ಯುವಕ, ಮಂಗಳವಾರ ರಾತ್ರಿ ಮನೆಯಿಂದ ಹೊರ ಹೋದ ಚಂದ್ರು ಮೃತದೇಹ ಸೇತುವೆಯೊಂದರ ಕೆಳಭಾಗ ಕಂಡುಬಂದಿದೆ. ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದ್ದು, ಮಗನನ್ನು ಸಾಯಿಸಿ ಬಳಿಕ ದೇಹವನ್ನು ಸುಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮನೆಯ ಹೆಣ್ಣು ಮಕ್ಕಳನ್ನು ನೋಡ್ತಾನೆ ಎಂದು ಆರೋಪಿಸಿ ಎದುರು ಮನೆ ಕುಟುಂಬಸ್ಥರು ಹಲವು ಬಾರಿ ಜಗಳ ತೆಗೆದಿದ್ದರು. ಮೈ ಮೇಲೆ ಬೈಕ್ ಹತ್ತಿಸಲೂ ಬಂದಿದ್ದರು. ಹೀಗಾಗಿ ಅವರೇ ಕೃತ್ಯ ಎಸಗಿರಬಹುದೆಂದು ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.
ಇನ್ನು ಮಗ ಚಂದ್ರುವಿನ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ತಂದೆ ಬಸವರಾಜ್ ಪ್ರತಿಜ್ಞೆಯೊಂದನ್ನು ಮಾಡಿದ್ದಾರೆ. ತನಗೆ ಮೂರು ಎಕರೆ ಹೊಲ ಇದೆ. ಅದನ್ನು ಕಳೆದುಕೊಂಡರೂ ಚಿಂತೆ ಇಲ್ಲ. ಸಾಲ ಮಾಡಿಯಾದರೂ ಹಣ ತರ್ತೀನಿ. ಆದರೆ ಮಗನನ್ನು ಕೊಂದ ಆರೋಪಿಗಳನ್ನು ಮಾತ್ರ ಯಾವುದೇ ಕಾರಣಕ್ಕೂ ಸುಮ್ಮೆನ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಚಂದ್ರು ಬಹಳ ಒಳ್ಳೆಯ ಹುಡುಗ, ಯಾರ ಜೊತೆ ತಂಟೆ-ತಕರಾರು ಮಾಡಿದವನಲ್ಲ. ತಾನಾಯ್ತು, ತನ್ನ ಕೆಲಸವಾಯ್ತು ಎಂಬಂತಿದ್ದ. ನಿತ್ಯ ಕೆಲಸಕ್ಕೆ ಹೋಗುವಾಗ 100 ರೂಪಾಯಿ ನನ್ನ ಕೇಳಿ ಪಡೆಯುತ್ತಿದ್ದ ಎಂದು ಭಾವುಕರಾಗಿದ್ದಾರೆ.
ಹಿರಿಯ ಪುತ್ರನಾಗಿದ್ದ ಚಂದ್ರು ಸೇರಿ ಎರಡನೇ ಮಗ ಸುರೇಶ್ ಮದುವೆಗೆ ತಂದೆ ಬಸವರಾಜ್ ತಯಾರಿ ನಡೆಸಿದ್ದರು. ಬೀರಲಿಂಗೇಶ್ವರ ಜಾತ್ರೆಯ ಬಳಿಕ ಹುಡುಗಿ ನೋಡಬೇಕೆಂದು ನಿರ್ಧರಿಸಿದ್ದರು. ಆದರೆ ಅಷ್ಟರೊಳಗಾಗಲೇ ಮಗನ ಪ್ರಾಣಪಕ್ಷಿ ಹಾರಿಹೋಗಿದೆ. ಮಗನ ಮದುವೆ ಕಣ್ತುಂಬಿಕೊಳ್ಳಬೇಕೆಂದಿದ್ದ ಪೋಷಕರು, ಕರುಳ ಕುಡಿಯ ಅಂತ್ಯ ಸಂಸ್ಕಾರವನ್ನು ತಾವೇ ಮುಂದೆ ನಿಂತು ನೆರವೇರಿಸಬೇಕಾದ ಸ್ಥಿತಿ ಬಂದಿದೆ. ಹೀಗಾಗಿ ಮಗನ ಸಾವಿಗೆ ಸೇಡು ತೀರಿಸಿಕೊಳ್ಳೋದಾಗಿ ಬಸವರಾಜ್ ಅವರು ಹೇಳಿದ್ದಾರೆ.
ಇದನ್ನೂ ಓದಿ : ಕುಕ್ಕರ್ ಬಾಂಬ್ ಸ್ಫೋಟ ಕೇಸ್ : ತಪ್ಪೊಪ್ಪಿಕೊಂಡ ಪ್ರಮುಖ ಆರೋಪಿ


















