ಮೈಸೂರು : ಹುಸಿಬಾಂಬ್ ಸಂದೇಶ ನೀಡಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುತ್ತಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಪ್ರತಿಷ್ಠಿತ ಬೃಂದಾವನ ಬಡಾವಣೆ ಎರಡನೇ ಹಂತ 6ನೇ ಕ್ರಾಸ್‌ನ ಮನೆಯೊಂದರಲ್ಲಿ ಅಡಗಿ ಕುಳಿತು ನಿಗೂಢವಾಗಿ ಬಾಂಬ್ ಸ್ಪೋಟಿಸುವ ಬಗ್ಗೆ ಬೆದರಿಕೆ ಸಂದೇಶ ಹಾಕುತ್ತಿದ್ದ ಶ್ರೀನಿವಾಸ್ ಎಂಬಾತ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಇತ್ತೀಚೆಗೆ ಸರ್ಕಾರಿ ಕಚೇರಿಗಳು, ಶಾಲಾ ಕಟ್ಟಡಗಳು ಹಾಗೂ ನ್ಯಾಯಾಲಯಗಳಿಗೆ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಸಂದೇಶ ರವಾನೆ ಮಾಡುವ ಮೂಲಕ ಆತಂಕ ಸೃಷ್ಟಿ ಮಾಡುತ್ತಿದ್ದ. ಒಂದೇ ತಿಂಗಳಿನಲ್ಲಿ ಹಲವು ಬಾರಿ ಮೇಲ್ ಮೂಲಕ ಸಂದೇಶ ರವಾನೆ ಮಾಡಿದ್ದ.
ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಈ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರಿಗೆ ಮೈಸೂರಿನಿಂದ ಕಾರ್ಯಾಚರಣೆ ಮಾಡಿರುವ ಬಗ್ಗೆ ಮಾಹಿತಿ ಬಂದಿದೆ. ಕೂಡಲೇ ದೆಹಲಿ ಪೊಲೀಸರ ತಂಡ ದಿಢೀರ್ ದಾಳಿ ಮಾಡಿ ಆರೋಪಿ ಶ್ರೀನಿವಾಸ್‌ನನ್ನು ಬಂಧಿಸಿದ್ದಾರೆ.
ದೆಹಲಿ ಪೊಲೀಸರಿಗೆ ಮೈಸೂರಿನ ವಿವಿ ಪುರಂ ಠಾಣೆ ಪೊಲೀಸರು ಸಾಥ್ ನೀಡಿದ್ದು, ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ದೆಹಲಿಗೆ ಕರೆದೊಯ್ಯಲಾಗಿದೆ. ಇನ್ನು ಆರೋಪಿಯ ಮನೆಯಲ್ಲಿದ್ದ ಹಲವು ಸಿಮ್‌ಗಳು ಹಾಗೂ ಲ್ಯಾಪ್‌ಟ್ಯಾಪ್‌ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಇದನ್ನೂ ಓದಿ : ‘ನನಗೆ IPL ಟಿಕೆಟ್ ಬೇಡ’ – ವಿಐಪಿ ಸಂಸ್ಕೃತಿ ವಿರುದ್ಧ ಶಾಸಕ ಸುರೇಶ್ ಕುಮಾರ್ ಕಿಡಿ!


















