ಟೆಹ್ರಾನ್/ವಾಷಿಂಗ್ಟನ್ : ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕದನ ವಿರಾಮದ ಪ್ರಸ್ತಾವನೆಗೆ ಇರಾನ್ ಅತ್ಯಂತ ಕಠಿಣ ಬೇಡಿಕೆಗಳು ಹಾಗೂ ಷರತ್ತುಗಳ ಪಟ್ಟಿಯನ್ನು ಮುಂದಿಟ್ಟಿದೆ. ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಎಲ್ಲಾ ಸೇನಾ ನೆಲೆಗಳನ್ನು ಮುಚ್ಚಬೇಕು ಹಾಗೂ ಹೊರ್ಮುಜ್ (Hormuz Strait) ಜಲಸಂಧಿಯ ಮೇಲೆ ಸಂಪೂರ್ಣ ನಿಯಂತ್ರಣ ನೀಡಬೇಕು ಎಂದು ಇರಾನ್ ಷರತ್ತು ವಿಧಿಸಿದ್ದು, ಇದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವಿಶ್ವದ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗವಾದ ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಂದ ಶುಲ್ಕ ವಸೂಲಿ ಮಾಡುವ ಅಧಿಕಾರ ತನಗೆ ಬೇಕೆಂದು ಇರಾನ್ ಪ್ರತಿಪಾದಿಸಿದೆ. ಯುದ್ಧದಿಂದ ಉಂಟಾದ ಹಾನಿಗೆ ಆರ್ಥಿಕ ಪರಿಹಾರ, ಇಸ್ರೇಲ್ ನಡೆಸುತ್ತಿರುವ ಹೆಜ್ಬುಲ್ಲಾ ವಿರುದ್ಧದ ಕಾರ್ಯಾಚರಣೆ ಅಂತ್ಯ ಮತ್ತು ಇರಾನ್ ಮೇಲಿರುವ ಎಲ್ಲಾ ದಿಗ್ಬಂಧನಗಳ ತೆರವು ಈ ಬೇಡಿಕೆಗಳಲ್ಲಿ ಪ್ರಮುಖವಾಗಿವೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪ್ರಸ್ತುತ ಆಡಳಿತದ ಮೇಲೆ ಹಿಡಿತ ಸಾಧಿಸಿದ್ದು, ಈ ಕಠಿಣ ಷರತ್ತುಗಳ ಹಿಂದೆ ಅವರ ಕೈವಾಡವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಮೆರಿಕದ ವಿರುದ್ಧ ವಾಗ್ದಾಳಿ
ಇರಾನ್ ಮಿಲಿಟರಿ ವಕ್ತಾರ ಇಬ್ರಾಹಿಂ ಜೊಲ್ಫಾಕಾರಿ ಅವರು ವಾಷಿಂಗ್ಟನ್‌ನ ನಾಯಕತ್ವವನ್ನು ತೀವ್ರವಾಗಿ ಲೇವಡಿ ಮಾಡಿದ್ದಾರೆ. “ಅಮೆರಿಕ ತನ್ನಷ್ಟಕ್ಕೆ ತಾನೇ ಸಂಧಾನ ಮಾಡಿಕೊಳ್ಳುತ್ತಿದೆ” ಎಂದು ವ್ಯಂಗ್ಯವಾಡಿರುವ ಅವರು, ಅಮೆರಿಕವು ಇರಾನ್‌ನ ಶಕ್ತಿಯನ್ನು ಒಪ್ಪಿಕೊಳ್ಳದ ಹೊರತು ಈ ಭಾಗದಲ್ಲಿ ಇಂಧನ ಬೆಲೆಗಳು ಇಳಿಕೆಯಾಗುವುದಿಲ್ಲ ಮತ್ತು ಹೂಡಿಕೆಗಳಿಗೆ ಭದ್ರತೆ ಇರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಅಮೆರಿಕದ ಒಳಗಿನ ರಾಜಕೀಯ ಸಂಘರ್ಷಗಳನ್ನು ಅವರು “ನಿಮ್ಮೊಂದಿಗೆ ನಾವು ಎಂದಿಗೂ ಒಂದಾಗಲು ಸಾಧ್ಯವಿಲ್ಲ” ಎಂಬ ಮಾತಿನ ಮೂಲಕ ಕುಟುಕಿದ್ದಾರೆ.
ತೆರೆಮರೆಯ ಮೃದು ಧೋರಣೆ
ಬಹಿರಂಗವಾಗಿ ಇರಾನ್ ಕಠಿಣ ನಿಲುವು ತಳೆದಿದ್ದರೂ, ಆಂತರಿಕವಾಗಿ ಕೆಲವು ಹೊಂದಾಣಿಕೆಗಳಿಗೆ ಸಿದ್ಧವಿರುವ ಮುನ್ಸೂಚನೆ ನೀಡಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಇರಾನ್ ತನ್ನ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಯನ್ನು ಐದು ವರ್ಷಗಳ ಕಾಲ ಸ್ಥಗಿತಗೊಳಿಸಲು ಮತ್ತು ಯುರೇನಿಯಂ ಸಂವರ್ಧನೆಯ ಮಟ್ಟವನ್ನು ಕಡಿಮೆ ಮಾಡಲು ಒಪ್ಪುವ ಸಾಧ್ಯತೆಯಿದೆ. ಅಲ್ಲದೆ, ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ (IAEA) ತಪಾಸಣೆಗೆ ಅವಕಾಶ ನೀಡುವುದು ಮತ್ತು ಪ್ರಾದೇಶಿಕ ಉಗ್ರಗಾಮಿ ಗುಂಪುಗಳಿಗೆ ನೀಡುತ್ತಿರುವ ಧನಸಹಾಯವನ್ನು ನಿಲ್ಲಿಸುವ ಬಗ್ಗೆಯೂ ಇರಾನ್ ಮಾತುಕತೆ ನಡೆಸಲು ಸಿದ್ಧವಿದೆ ಎಂಬ ಸುಳಿವು ಸಿಕ್ಕಿದೆ.
ಅನಿಶ್ಚಿತತೆಯ ಹಾದಿಯಲ್ಲಿ ಕದನ ವಿರಾಮ
ಒಂದೆಡೆ ಸಾರ್ವಜನಿಕವಾಗಿ ಕಠಿಣ ಷರತ್ತುಗಳನ್ನು ವಿಧಿಸುತ್ತಾ, ಮತ್ತೊಂದೆಡೆ ಖಾಸಗಿಯಾಗಿ ಮೃದು ಧೋರಣೆಯ ಸಂಕೇತಗಳನ್ನು ನೀಡುತ್ತಿರುವುದು ಇರಾನ್‌ನ ರಾಜತಾಂತ್ರಿಕ ತಂತ್ರಗಾರಿಕೆಯ ಭಾಗವಾಗಿದೆ. ಅಮೆರಿಕ ಈ ಬೇಡಿಕೆಗಳನ್ನು ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳುತ್ತದೆ ಎಂಬುದು ಈಗ ಕುತೂಹಲದ ವಿಷಯವಾಗಿದೆ. ಈ ಸಂಧಾನದ ಫಲಿತಾಂಶವು ಕೇವಲ ಎರಡು ದೇಶಗಳ ನಡುವಿನ ಸಂಬಂಧವನ್ನಷ್ಟೇ ಅಲ್ಲದೆ, ಇಡೀ ವಿಶ್ವದ ತೈಲ ಮಾರುಕಟ್ಟೆ ಮತ್ತು ಪ್ರಾದೇಶಿಕ ಸ್ಥಿರತೆಯ ಮೇಲೆ ನೇರ ಪರಿಣಾಮ ಬೀರಲಿದೆ.
ಇದನ್ನೂ ಓದಿ : ದಿಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಿಗ್ ಶಾಕ್ ನೀಡಿದ ಬೆನ್ ಡಕೆಟ್ ; ನಿಷೇಧದ ಭೀತಿಯಲ್ಲಿ ಇಂಗ್ಲೆಂಡ್ ಬ್ಯಾಟರ್



















