ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣ ದಿನೇದಿನೆ ರಂಗೇರುತ್ತಿದ್ದು, ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಅಖಾಡಕ್ಕಿಳಿದಿವೆ. ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಅನುಕಂಪದ ಅಲೆಯಲ್ಲಿ ಗೆಲುವು ಸಾಧಿಸಲು ಆಡಳಿತರೂಢ ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದು, ಶಾಮನೂರು ಕುಟುಂಬದ 27 ವರ್ಷದ ಉದ್ಯಮಿ ಸಮರ್ಥ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಪಕ್ಷದ ಟಿಕೆಟ್‌ಗಾಗಿ ಉಂಟಾದ ಅಸಮಾಧಾನವನ್ನು ಸಮಾಧಾನಗೊಳಿಸಲು ಮುಸ್ಲಿಂ ಸಮುದಾಯದ ನಾಯಕರಿಗೆ ಭವಿಷ್ಯದಲ್ಲಿ ನಿಗಮ, ಮಂಡಳಿ ಹಾಗೂ ಪರಿಷತ್ ಸ್ಥಾನಗಳ ಭರವಸೆ ನೀಡಲಾಗಿದೆ.
ಇದರೊಂದಿಗೆ ಕಾಂಗ್ರೆಸ್ ಭದ್ರಕೋಟೆಯಾದ ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಸಮರ್ಥ್ ಮೇಲೆ ಇದೆ. ಅವರ ನಾಮಪತ್ರ ಸಲ್ಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ದಾವಣಗೆರೆಗೆ ಆಗಮಿಸಲಿದ್ದಾರೆ.
ಇನ್ನೊಂದೆಡೆ, ಬಿಜೆಪಿ ಕೂಡ ಅಚ್ಚರಿಯ ಅಭ್ಯರ್ಥಿಯನ್ನು ಘೋಷಿಸಿದ್ದು, ಸಾಮಾನ್ಯ ಕಾರ್ಯಕರ್ತ ಹಾಗೂ ಎಸ್‌ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಿದೆ. ಈ ಮೂಲಕ ದಲಿತ ಹಾಗೂ ಅಲ್ಪಸಂಖ್ಯಾತ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಶ್ರೀನಿವಾಸ್ ದಾಸಕರಿಯಪ್ಪ ಅವರ ತಂದೆ ದಾಸ ಕರಿಯಪ್ಪ ಜೆಡಿಎಸ್‌ನ ಪ್ರಮುಖ ನಾಯಕನಾಗಿದ್ದ ಹಿನ್ನೆಲೆ, ಅವರ ಪುತ್ರನಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಹೊಸ ರಾಜಕೀಯ ಸಮೀಕರಣಗಳನ್ನು ಪ್ರಯೋಗಿಸಿದೆ.
ಒಟ್ಟಾರೆ, ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಮುಸ್ಲಿಂ ಮತದಾರರ ಪಾತ್ರ ನಿರ್ಣಾಯಕವಾಗಲಿದೆ. ಈ ಕ್ಷೇತ್ರ ಈಗ ಎರಡೂ ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಮತದಾರರು ಯಾರಿಗೆ ಆಶೀರ್ವದಿಸುತ್ತಾರೋ ಕಾದು ನೋಡಬೇಕಿದೆ.
ಇದನ್ನೂ ಓದಿ : ರಂಗೇರಿದ ದಾವಣಗೆರೆ ಉಪಚುನಾವಣೆ : ಮುಖಂಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ


















