ಯಾದಗಿರಿ : ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂಬ ಹಿನ್ನೆಲೆ, ಯಾದಗಿರಿ ಜಿಲ್ಲೆಯಲ್ಲಿಯೂ ಎಲ್‌ಪಿಜಿ ಸಿಲಿಂಡರ್ ಕೊರತೆ ತೀವ್ರವಾಗುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಲು ಜನರು ಗ್ಯಾಸ್ ಏಜೆನ್ಸಿ ಕಚೇರಿಯ ಮುಂದೆ ಗುಂಪುಗೂಡಿದ ಘಟನೆ ನಡೆದಿದೆ. ಸಿಲಿಂಡರ್ ಸಿಗದೇ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತ ಜನರು ಆಕ್ರೋಶ ವ್ಯಕ್ತಪಡಿಸಿದರು.
ಏಜೆನ್ಸಿ ಸಿಬ್ಬಂದಿ ಸಾರ್ವಜನಿಕರಿಗೆ ಸಿಲಿಂಡರ್ ನೀಡದೇ ಅಕ್ರಮವಾಗಿ ಬೇರೆಡೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಕೋಪಗೊಂಡ ಜನರು ಖಾಲಿ ಸಿಲಿಂಡರ್‌ಗಳನ್ನು ತಂದು ಪ್ರತಿಭಟನೆ ನಡೆಸಿ, ಏಜೆನ್ಸಿ ಮಾಲೀಕನ ವಿರುದ್ಧ ಕೂಗಾಡಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟು ಪರಿಸ್ಥಿತಿ ನಿಭಾಯಿಸಿದರು. ಘಟನೆ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸಿಲಿಂಡರ್ ಸರಬರಾಜು ಸಮಸ್ಯೆ ತಕ್ಷಣ ಪರಿಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಗಾಂಜಾ ಅಮಲಿನಲ್ಲಿ ಸ್ನೇಹಿತನನ್ನೇ ಬರ್ಬರವಾಗಿ ಕೊಲೆಗೈದ ಕ್ರೂರಿ ಗೆಳೆಯರು



















