ಬೆಂಗಳೂರು : ದೇವಸ್ಥಾನದ ಅರ್ಚಕರನ್ನೇ ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ವಂಚಕ ಕಳ್ಳನನ್ನು ಬೆಂಗಳೂರಿನ ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪ್ರವೀಣ್ ಭಟ್ ಎಂದು ಗುರುತಿಸಲಾಗಿದ್ದು, ಅವನಿಂದ ಸುಮಾರು 15 ಲಕ್ಷ ರೂ. ಮೌಲ್ಯದ 116 ಗ್ರಾಂ ಚಿನ್ನ ಹಾಗೂ 409 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈತ ಶ್ರೀಮಂತ ಉದ್ಯಮಿಯ ಸೋಗಿನಲ್ಲಿ ದೇಗುಲಗಳ ಅರ್ಚಕರ ಜತೆ ಪರಿಚಯ ಮಾಡಿಕೊಂಡು ಮುತ್ತೈದೆಯರು ಬೇಕೆಂದು ಅವರ ಚಿನ್ನಾಭರಣ ಕದಿಯುತ್ತಿದ್ದ.
ಪ್ರವೀಣ್ ಭಟ್ ತನ್ನನ್ನು ಶ್ರೀಮಂತ ಉದ್ಯಮಿ ಎಂದು ಪರಿಚಯಿಸಿಕೊಂಡು, ಮೊದಲಿಗೆ ವಿವಿಧ ಪ್ರದೇಶಗಳ ಪ್ರಸಿದ್ಧ ದೇವಸ್ಥಾನಗಳಿಗೆ ತೆರಳಿ ಅರ್ಚಕರೊಂದಿಗೆ ಸ್ನೇಹ ಬೆಳೆಸುತ್ತಿದ್ದ. ಆಗಾಗ ಪೂಜೆ ಮಾಡಿಸಿ, ದೇವಸ್ಥಾನಕ್ಕೆ ಸಾವಿರಾರು ರೂಪಾಯಿ ದೇಣಿಗೆ ನೀಡುವ ಮೂಲಕ ವಿಶ್ವಾಸ ಗಳಿಸುತ್ತಿದ್ದ. ಬಳಿಕ ತನ್ನ ಹೊಸ ಅಂಗಡಿ ಉದ್ಘಾಟನೆಗಾಗಿ ವಿಶೇಷ ಪೂಜೆ ಮಾಡಬೇಕೆಂದು ಹೇಳಿ, ‘ಮುತ್ತೈದೆಯರು ಬೇಕು’ ಎಂಬ ನೆಪದಲ್ಲಿ ಅರ್ಚಕರ ಮನೆಯವರನ್ನು ಕಳುಹಿಸುವಂತೆ ಕೇಳುತ್ತಿದ್ದ.
ಇದಕ್ಕೆ ಮರುಳಾದ ಕೆಲ ಅರ್ಚಕರು ತಮ್ಮ ಪತ್ನಿಯನ್ನು ಕಳುಹಿಸುತ್ತಿದ್ದರು. ಪೂಜೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಮಹಿಳೆಯರನ್ನು ಆಟೋದಲ್ಲಿ ಕರೆದೊಯ್ಯುತ್ತಿದ್ದ ಆರೋಪಿ, ‘ನೀವು ಹೋಗುವ ಜಾಗದಲ್ಲಿ ಒಡವೆಗಳನ್ನು ಹಾಕಿಕೊಳ್ಳಬೇಡಿ, ನನ್ನ ಬಳಿ ಇಡಿ, ನಂತರ ಕೊಡುತ್ತೇನೆ’ ಎಂದು ಹೇಳಿ ಆಭರಣಗಳನ್ನು ಪಡೆದುಕೊಳ್ಳುತ್ತಿದ್ದ. ಬಳಿಕ ಮಧ್ಯದಲ್ಲೇ ಮಹಿಳೆಯರನ್ನು ಬಿಟ್ಟು ಪರಾರಿಯಾಗುತ್ತಿದ್ದ.
ಈ ರೀತಿಯಾಗಿ ಐದುಕ್ಕೂ ಹೆಚ್ಚು ಪ್ರಕರಣಗಳಲ್ಲಿ ಇದೇ ರೀತಿಯಲ್ಲಿ ವಂಚನೆ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೆಬ್ಬಾಳ, ರಾಮಮೂರ್ತಿನಗರ, ಸಿಟಿ ಮಾರ್ಕೆಟ್, ರಾಜಾಜಿನಗರ ಹಾಗೂ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಗಳಲ್ಲಿ ಪ್ರವೀಣ್ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಅರ್ಚಕರ ಕುಟುಂಬದವರಿಂದ ಬಂದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ರಾಜಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸಿ, ಚಿನ್ನ-ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಮುಂದಿನ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ತೀರ್ಥಯಾತ್ರೆ ಮುಗಿಸಿ ಬರುತ್ತಿದ್ದ ವೇಳೆ ಭೀಕರ ಅಪಘಾತ.. ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವು!



















