ಹಾಸನ : ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಕಿರಿಯ ಸಹೋದರಿ ಜವರಮ್ಮ (88) ಅವರು ಇಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು, ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಮೃತ ಜವರಮ್ಮ ಅವರು ಹೊಳೆನರಸೀಪುರ ತಾಲ್ಲೂಕಿನ ಬಸವನಾಯಕನಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಮ್ಮ ಪ್ರೀತಿಯ ತಂಗಿಯ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತೀವ್ರ ಕಂಬನಿ ಮಿಡಿದಿದ್ದಾರೆ.
ಸಹೋದರಿಯ ನಿಧನದಿಂದಾಗಿ ದೇವೇಗೌಡರ ಕುಟುಂಬದಲ್ಲಿ ಶೋಕದ ಛಾಯೆ ಆವರಿಸಿದೆ. ಕುಟುಂಬದ ಸದಸ್ಯರು, ಆಪ್ತರು ಹಾಗೂ ರಾಜಕೀಯ ಗಣ್ಯರು ಜವರಮ್ಮ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ದೇವೇಗೌಡರು ತಮ್ಮ ರಾಜಕೀಯ ಬಿಡುವಿನ ನಡುವೆಯೂ ಸಹೋದರಿಯ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು ಎನ್ನಲಾಗಿದೆ.
ಜವರಮ್ಮ ಅವರ ಅಂತ್ಯಕ್ರಿಯೆಯು ಅವರ ಸ್ವಗ್ರಾಮವಾದ ಹೊಳೆನರಸೀಪುರ ತಾಲ್ಲೂಕಿನ ಬಸವನಾಯಕನಹಳ್ಳಿಯಲ್ಲಿ ಇಂದು ಸಂಜೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಗ್ರಾಮದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ.
ಇದನ್ನೂ ಓದಿ : ಜಸ್‌ಪ್ರೀತ್ ಬುಮ್ರಾಗೆ ಬಿಸಿಸಿಐ ಗುತ್ತಿಗೆಯಲ್ಲಿ 2 ಕೋಟಿ ರೂ. ಕಡಿತದ ಭೀತಿ!



















