ಬೆಂಗಳೂರು : ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಒಂದು ಅತ್ಯಂತ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಶಬೀಲ್ ಎಂಬ ಯುವಕ ತಾನು ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನೇ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಆರೋಪಿ ಶಬಿಲ್ ಅಪ್ರಾಪ್ತೆಯನ್ನು ಹತ್ಯೆ ಮಾಡಿದ ಭೀಕರತೆ ಕೇಳಿದರೆ ಎಂಥವರು ಕೂಡ ಬೆಚ್ಚಿ ಬೀಳುತ್ತಾರೆ. ಪೊಲೀಸರು ಈಗ ಶಬೀಲ್‌ನನ್ನು ಹುಡುಕುತ್ತಿದ್ದಾರೆ. ಕೊಲೆಯಾಗಿ ಎರಡು ದಿನಗಳು ಕಳೆದರೂ ಆರೋಪಿಯ ಸುಳಿವು ಸಿಕ್ಕಿಲ್ಲ.
ಕೋಲಾರದಲ್ಲಿ ವಾಸವಾಗಿದ್ದ ಅಪ್ರಾಪ್ತೆ ಹುಡುಗಿ ಜೊತೆ ಆರೋಪಿ ಶಬಿಲ್‌ಗೆ 2025ರ ಜೂನ್‌ನಲ್ಲಿ ನಿಶ್ಚಿತಾರ್ಥ ಆಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ನಿಶ್ಚಿತಾರ್ಥದ ನಂತರ ಶಬೀಲ್‌ಗೆ ಆಕೆ ಮೇಲೆ ಅನುಮಾನ ಬಂದಿತ್ತು. ‘ಅವಳು ಬೇರೆಯವರೊಂದಿಗೆ ಮಾತನಾಡುತ್ತಿದ್ದಾಳಾ?’ ಎಂಬ ಸಂದೇಹ ಅವನ ಮನಸ್ಸಿನಲ್ಲಿ ಬೆಳೆದಿತ್ತು. ಈ ಅನುಮಾನವೇ ಕೊನೆಗೆ ಭೀಕರ ಕೊಲೆಗೆ ಕಾರಣವಾಯಿತು.
ರಂಜಾನ್ ಹಬ್ಬದ ಹಿನ್ನೆಲೆ ಈಕೆ ಬೆಂಗಳೂರಿನ ಸಂಬಂಧಿಕರ ಮನೆಗೆ ಬಂದಿದ್ದಳು. ಮನೆಯವರಿಗೆ ತಿಳಿಯದಂತೆ ಅವಳು ಶಬೀಲ್‌ನೊಂದಿಗೆ ಆಗಾಗ ಭೇಟಿಯಾಗುತ್ತಿದ್ದಳು. ಇಬ್ಬರೂ ಪಾಳು ಬಿದ್ದ ಒಂದು ಹಳೆಯ ಮನೆಯಲ್ಲಿ ಗುಪ್ತವಾಗಿ ಭೇಟಿಯಾಗುತ್ತಿದ್ದರು. ಕೊಲೆಯಾದ ದಿನ ಕೂಡ ಹಾಗೆಯೇ ನಡೆಯಿತು. 9 ಗಂಟೆ ಸುಮಾರಿಗೆ ಜೋಯಾ ಮನೆಯಿಂದ ಹೊರಟ್ಟಿದ್ದಳು. ತನ್ನ ಫೋನ್ ಅನ್ನು ಮನೆಯಲ್ಲೇ ಇಟ್ಟು, ಯಾರಿಗೂ ತಿಳಿಯದಂತೆ ಶಬೀಲ್‌ನನ್ನು ಭೇಟಿ ಮಾಡಲು ಹೋಗಿದ್ದಳು.
ನಂತರ ಆ ಪಾಳು ಬಿದ್ದ ಮನೆಯಲ್ಲಿ ಇಬ್ಬರು ಭೇಟಿಯಾಗಿದ್ದರು. ಅಲ್ಲಿ ಅವನ ಅನುಮಾನ ತುಂಬಾ ಹೆಚ್ಚಾಗಿದ್ದು, ಆಕೆಯನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದಾನೆ. ಮೊದಲು ಅವಳ ಎದೆಯ ಭಾಗವನ್ನು ಚಾಕುವಿನಿಂದ ಕೊಯ್ದು ಭೀಕರ ಕ್ರೌರ್ಯ ತೋರಿದ್ದಾನೆ. ನಂತರ ಅವಳ ಗುಪ್ತಾಂಗಕ್ಕೂ ಚಾಕು ಇರಿದಿದ್ದಾನೆ. ಕೊನೆಗೆ ಅವಳ ಕತ್ತನ್ನು ಕೊಯ್ದು ಹತ್ಯೆ ಮಾಡಿದ್ದಾನೆ. ಈ ಕ್ರೌರ್ಯ ಯಾವುದೇ ಮನುಷ್ಯನಿಗೆ ಊಹಿಸಲೂ ಸಾಧ್ಯವಿಲ್ಲದಷ್ಟು ಭಯಂಕರವಾಗಿತ್ತು. ಕೊಲೆ ಮಾಡಿದ ನಂತರ ಶಬೀಲ್ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ.
ಮನೆಯವರು ಈ ಅಪ್ರಾಪ್ತ ಬಾಲಕಿ ತಡವಾದರೂ ಮನೆಗೆ ಬರದಿದ್ದುದಕ್ಕೆ ಆತಂಕಗೊಂಡಿದ್ದು, ಅವಳ ಫೋನ್ ಮನೆಯಲ್ಲೇ ಇದ್ದುದರಿಂದ ಕರೆ ಮಾಡಿದರೂ ಸಂಪರ್ಕ ಸಿಗಲಿಲ್ಲ. ನಂತರ ಅವರು ಶಬೀಲ್‌ನ ಕುಟುಂಬಸ್ಥರನ್ನು ಸಂಪರ್ಕಿಸಿದರು.
ಅವರಿಂದ ಪಾಳು ಬಿದ್ದ ಮನೆಯ ವಿಷಯ ತಿಳಿಯಿತು. ಇಬ್ಬರೂ ಆಗಾಗ ಅಲ್ಲಿಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿತು. ಕುಟುಂಬದವರು ತಕ್ಷಣವೇ ಆ ಮನೆಗೆ ಹೋಗಿದ್ದು, ಅಲ್ಲಿ ಬಾಲಕಿ ಮೃತದೇಹ ಕಂಡಿದ್ದಾರೆ. ಇದನ್ನು ಕಂಡು ಬೆಚ್ಚಿಬಿದ್ದ ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸದ್ಯ ಪೊಲೀಸರು ಈಗ ಆರೋಪಿ ಶಬೀಲ್‌ನನ್ನು ಹುಡುಕಲು ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಉಡುಪಿಯಲ್ಲಿ ‘ಸಮಾಧಾನ ಮಹೋತ್ಸವ’ಕ್ಕೆ ಅವಕಾಶ ಕೊಟ್ಟರೆ ತೀವ್ರ ಹೋರಾಟ ಖಚಿತ : ಹಿಂಜಾವೇ ಎಚ್ಚರಿಕೆ



















