ಬೀದರ್ : ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾದ ಹಿನ್ನೆಲೆಯಲ್ಲಿ, ಬೀದರ್ ಜಿಲ್ಲೆಯಲ್ಲಿ ಕಾಳಸಂತೆ ದಂಧೆ ನಡೆಯುತ್ತಿರುವುದು ಪೊಲೀಸರ ದಾಳಿಯಿಂದ ಬಯಲಾಗಿದೆ.
ಜಿಲ್ಲೆಯ ಜನವಾಡ ಗ್ರಾಮದ ಜಮೀನೊಂದರಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜನವಾಡ ಪೊಲೀಸರು, 2 ವಾಹನಗಳೊಂದಿಗೆ 105 ಎಲ್‌ಪಿಜಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿಯಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು 18.55 ಲಕ್ಷ ಎಂದು ಅಂದಾಜಿಸಲಾಗಿದೆ.
ಇಂಡೇನ್ ಹಾಗೂ ಹೆಚ್‌ಪಿ ಗ್ಯಾಸ್ ಏಜೆನ್ಸಿಗಳಿಂದ ಪಡೆದ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಡಬಲ್, ತ್ರಿಬಲ್ ದರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಸುಮಾರು 1000 ಮೌಲ್ಯದ ಗೃಹ ಬಳಕೆ ಸಿಲಿಂಡರ್‌ಗಳನ್ನು 2000 ರಿಂದ 3000ರವರೆಗೆ ಮಾರಾಟ ಮಾಡುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಈ ಅಕ್ರಮದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಡಗಾಂವ್ ಗ್ರಾಮದ ಮಲ್ಹಾರಿ ಇಂಡೇನ್ ಗ್ಯಾಸ್ ಗ್ರಾಮೀಣ ಏಜೆನ್ಸಿ ವಿರುದ್ಧವೂ ಪ್ರಕರಣ ದಾಖಲಾಗಿದೆ. ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಹುಡುಗಿಗಾಗಿ ಕಲ್ಲಿನಿಂದ ಜಜ್ಜಿ ಸ್ವಂತ ತಮ್ಮನನ್ನೇ ಕೊಂದ ಪಾಪಿ ಅಣ್ಣ



















