ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದ ದೂರು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ.
ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ, 2026ರ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್‌ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಮಾರ್ಚ್ 9ರಂದು ಪ್ರಕಟಿಸಲಾಗಿತ್ತು. ಈ ಪಟ್ಟಿಯನ್ನು ಸಂಬಂಧಿತ ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳ ಕಚೇರಿಗಳು, ಸಹಾಯಕ ನೋಂದಣಾಧಿಕಾರಿಗಳ ಕಚೇರಿಗಳು ಹಾಗೂ ವಾರ್ಡ್ ಕಚೇರಿಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿದೆ. ಜೊತೆಗೆ ಜಿಬಿಎ ವೆಬ್‌ಸೈಟ್‌ನಲ್ಲಿಯೂ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಮೊದಲಿಗೆ ಮಾರ್ಚ್ 10ರಿಂದ 16ರವರೆಗೆ ದೂರು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಅವಧಿ ವಿಸ್ತರಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ, ಜಿಬಿಎ ರಾಜ್ಯ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಈ ಮನವಿಯನ್ನು ಪರಿಗಣಿಸಿದ ರಾಜ್ಯ ಚುನಾವಣಾ ಆಯೋಗ, ಸಾರ್ವಜನಿಕರು ಹಾಗೂ ಮತದಾರರ ಅನುಕೂಲಕ್ಕಾಗಿ ದೂರು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ಮಾರ್ಚ್ 20ರವರೆಗೆ ವಿಸ್ತರಿಸಿದೆ ಎಂದು ಜಿಬಿಎ ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ : ಕಟ್ಟಡ ಮಾಲೀಕರಿಗೆ ಶಾಕ್ ಕೊಟ್ಟ ಜಿಬಿಎ..!



















