ಕೋಲ್ಕತ್ತಾ : ಮುಂಬರುವ ಐಪಿಎಲ್ ಆವೃತ್ತಿಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ತನ್ನ ಬ್ಯಾಟಿಂಗ್ ಕ್ರಮಾಂಕದಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳಬೇಕು ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಸಲಹೆ ನೀಡಿದ್ದಾರೆ. ವಿಶೇಷವಾಗಿ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ ಅವರನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಿ ಮೇಲಿನ ಕ್ರಮಾಂಕದಲ್ಲಿ ಆಡಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಕಳೆದ ಸೀಸನ್‌ನಲ್ಲಿ ಕೆಕೆಆರ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಮಾತನಾಡಿದ ರೈನಾ, “ಕಳೆದ ಬಾರಿ ಕೆಕೆಆರ್ ಮಧ್ಯಮ ಕ್ರಮಾಂಕದಲ್ಲಿ ಸಾಕಷ್ಟು ಪರದಾಡಿತ್ತು. ರಸೆಲ್, ರಮಣ್‌ದೀಪ್ ಮತ್ತು ರಿಂಕು ಸಿಂಗ್ ಅವರಂತಹ ಪ್ರಮುಖ ಆಟಗಾರರು 7, 8 ಮತ್ತು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುತ್ತಿದ್ದರು. ಇದು ಸರಿಯಾದ ಕ್ರಮವಲ್ಲ. ರಿಂಕು ಸಿಂಗ್ ಕೇವಲ ಪಂದ್ಯ ಮುಗಿಸುವ ‘ಸ್ಲಾಗರ್’ ಅಲ್ಲ, ಅವರು ಒಬ್ಬ ಪರಿಪೂರ್ಣ ಬ್ಯಾಟರ್. ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸಿದರೆ ದೀರ್ಘ ಇನ್ನಿಂಗ್ಸ್ ಕಟ್ಟಬಲ್ಲರು ಮತ್ತು ಪಂದ್ಯಗಳನ್ನು ಗೆಲ್ಲಿಸಿಕೊಡಬಲ್ಲರು” ಎಂದು ತಿಳಿಸಿದ್ದಾರೆ.
ಆರಂಭಿಕ ಜೋಡಿ ಮತ್ತು ವಿದೇಶಿ ಆಟಗಾರರ ಆಯ್ಕೆ
ಕೆಕೆಆರ್ ತಂಡದ ಆರಂಭಿಕ ಜೋಡಿಯ ಬಗ್ಗೆಯೂ ರೈನಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನ್ಯೂಜಿಲೆಂಡ್‌ನ ಆಕ್ರಮಣಕಾರಿ ಬ್ಯಾಟರ್ ಫಿನ್ ಅಲೆನ್ ಅವರನ್ನು ಸುನಿಲ್ ನರೈನ್ ಜೊತೆ ಆರಂಭಿಕರಾಗಿ ಕಣಕ್ಕಿಳಿಸಬೇಕು ಎಂಬುದು ರೈನಾ ಆಶಯ. ಕೆಕೆಆರ್ ತಂಡವು ಫಿನ್ ಅಲೆನ್ ಮತ್ತು ಟಿಮ್ ಸೀಫರ್ಟ್ ಇಬ್ಬರನ್ನೂ ಹರಾಜಿನಲ್ಲಿ ಖರೀದಿಸಿದೆ. ಆದರೆ, ಇತ್ತೀಚಿನ ಟಿ20 ವಿಶ್ವಕಪ್ ಪ್ರದರ್ಶನದ ಆಧಾರದ ಮೇಲೆ ಫಿನ್ ಅಲೆನ್ ಸೂಕ್ತ ಎಂಬುದು ರೈನಾ ಅನಿಸಿಕೆ.
ಇನ್ನುಳಿದ ವಿದೇಶಿ ಆಟಗಾರರ ಪಟ್ಟಿಯಲ್ಲಿ ಸುನಿಲ್ ನರೈನ್, ಕ್ಯಾಮರೂನ್ ಗ್ರೀನ್ ಹಾಗೂ ವೇಗಿಗಳಾದ ಮತೀಶ ಪತಿರಾನ ಅಥವಾ ಬ್ಲೆಸ್ಸಿಂಗ್ ಮುಜರಬಾನಿ ಅವರಲ್ಲಿ ಒಬ್ಬರನ್ನು ಆಡಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಸಂಜಯ್ ಬಾಂಗರ್ ಭಿನ್ನ ಅಭಿಪ್ರಾಯ
ಇದೇ ವೇಳೆ ಮಾಜಿ ಕೋಚ್ ಸಂಜಯ್ ಬಾಂಗರ್ ಅವರು ಸ್ವಲ್ಪ ಭಿನ್ನವಾದ ಬ್ಯಾಟಿಂಗ್ ಕ್ರಮಾಂಕವನ್ನು ಸೂಚಿಸಿದ್ದಾರೆ. ಅಜಿಂಕ್ಯ ರಹಾನೆ ಅವರೊಂದಿಗೆ ಸುನಿಲ್ ನರೈನ್ ಅವರೇ ಇನ್ನಿಂಗ್ಸ್ ಆರಂಭಿಸುವುದು ಸೂಕ್ತ ಎಂದಿರುವ ಬಾಂಗರ್, ಕ್ಯಾಮರೂನ್ ಗ್ರೀನ್ ಅವರಿಗೆ 3ನೇ ಕ್ರಮಾಂಕ ನೀಡಬೇಕು ಎಂದಿದ್ದಾರೆ. ರಿಂಕು ಸಿಂಗ್, ರೋವ್ಮನ್ ಪವೆಲ್ ಮತ್ತು ರಮಣ್‌ದೀಪ್ ಸಿಂಗ್ ಕೆಳ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬಲಿದ್ದಾರೆ ಎಂಬುದು ಬಾಂಗರ್ ಅವರ ವಿಶ್ಲೇಷಣೆ.
ಅಭಿಷೇಕ್ ನಾಯರ್ ಮುಖ್ಯ ತರಬೇತುದಾರರಾಗಿ ಮತ್ತು ಶೇನ್ ವ್ಯಾಟ್ಸನ್ ಸಹಾಯಕ ತರಬೇತುದಾರರಾಗಿ ನೇಮಕಗೊಂಡಿರುವ ಬೆನ್ನಲ್ಲೇ, ಕೆಕೆಆರ್ ತಂಡವು ಅಜಿಂಕ್ಯ ರಹಾನೆ ಅವರ ನಾಯಕತ್ವದಲ್ಲಿ ಈ ಬಾರಿ ಯಾವ ರೀತಿಯ ತಂತ್ರ ರೂಪಿಸಲಿದೆ ಎಂಬುದು ಕುತೂಹಲಕಾರಿಯಾಗಿದೆ.
ಇದನ್ನೂ ಓದಿ : ಅಡ್ಡ ದಾರಿಯಿಂದ ಸರ್ಕಾರ ಬಿಳಿಸೋದು, ಆಮೀಷವೊಡ್ಡುವುದು ಬಿಜೆಪಿ ರಾಜಕೀಯ ತಂತ್ರ | ದಿನೇಶ್ ಗುಂಡೂರಾವ್



















