ಬೆಂಗಳೂರು : ವಿಧಾನಸಭೆ ಅಧಿವೇಶನದ ವೇಳೆ ಶಾಸಕರ ಪ್ರಶ್ನೆಗಳಿಗೆ ಸಚಿವರು ಸಮರ್ಪಕವಾಗಿ ಉತ್ತರ ನೀಡದ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿ ಕಲಾಪವನ್ನು ಸಮಯ ಹೇಳದೆ ಮುಂದೂಡಿದ ಘಟನೆ ನಡೆದಿದೆ.
ಲಿಖಿತ ರೂಪದಲ್ಲಿ ಕೇಳಲಾಗಿದ್ದ 230 ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಉತ್ತರ ಮಂಡನೆ ನಡೆಯುತ್ತಿದ್ದ ವೇಳೆ ಈ ಪ್ರಸಂಗ ಸಂಭವಿಸಿತು. ಸದನದಲ್ಲಿ ಸಚಿವರು ನಿರೀಕ್ಷಿತ ರೀತಿಯಲ್ಲಿ ಉತ್ತರ ನೀಡುತ್ತಿಲ್ಲ ಎಂಬ ಕಾರಣಕ್ಕೆ ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿ, ಸಚಿವರು ಸ್ಪಷ್ಟನೆ ನೀಡುವವರೆಗೂ ಸದನವನ್ನು ನಡೆಸುವುದಿಲ್ಲ ಎಂದು ಹೇಳಿ ಪೀಠದಿಂದ ಹೊರ ನಡೆದಿದ್ದಾರೆ.
ಸಚಿವ ಪರಮೇಶ್ವರ್ ಉತ್ತರಗಳನ್ನು ಮಂಡಿಸುತ್ತಿದ್ದ ವೇಳೆ ವಿಪಕ್ಷ ಸದಸ್ಯರು ಟೀಕೆ ವ್ಯಕ್ತಪಡಿಸಿದ್ದಾರೆ. ಕಲಾಪ ಆರಂಭದಿಂದಲೂ ಸಮರ್ಪಕ ಉತ್ತರಗಳು ದೊರಕುತ್ತಿಲ್ಲ ಎಂದು ಆರೋಪಿಸಿದ ವಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದನದಲ್ಲಿ ಎಲ್ಲಾ ಶಾಸಕರೂ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಗಮನ ಸೆಳೆಯುವ ಸೂಚನೆಗಳಿಗೂ ಸಚಿವರು ಉತ್ತರ ನೀಡುತ್ತಿಲ್ಲ. ಮೂರು ಬಾರಿ ಸೂಚನೆ ನೀಡಿದರೂ ಸುಧಾರಣೆ ಕಂಡುಬರಲಿಲ್ಲ ಎಂದು ಸ್ಪೀಕರ್ ಖಾದರ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಸಭೆ ಅಧಿವೇಶನದಲ್ಲಿ ಸ್ಪೀಕರ್ ಸಭಾತ್ಯಾಗ ಮಾಡಿರುವುದು ಸರ್ಕಾರಕ್ಕೆ ಚಾಟಿ ಏಟಾಗಿದೆ. ಪ್ರತಿದಿನವೂ ಕೇವಲ ಶೇ.10ರಿಂದ 30ರಷ್ಟು ಲಿಖಿತ ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಗುತ್ತಿದೆ. ಸರ್ಕಾರ ಹಿಡಿತ ಕಳೆದುಕೊಂಡಿದ್ದು, ಸಚಿವರು ಸದನಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ವಿಧಾನಸಭೆಯ ಇತಿಹಾಸದಲ್ಲೇ ಸರ್ಕಾರದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿ ಸ್ಪೀಕರ್ ಪೀಠ ಬಿಟ್ಟು ಹೊರಹೋಗಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಹೋಟೆಲ್ ಉದ್ಯಮಕ್ಕೆ ಮತ್ತೆ ಬಿಗ್ ಶಾಕ್ ಕೊಟ್ಟ ಸರ್ಕಾರ!



















