ಭುವನೇಶ್ವರ : ಒಡಿಶಾದ ಕಟಕ್‌ನಲ್ಲಿರುವ ಪ್ರತಿಷ್ಠಿತ ಎಸ್‌ಸಿಬಿ (SCB) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 10 ರೋಗಿಗಳು ಮೃತಪಟ್ಟಿದ್ದು, 11 ಮಂದಿ ಸಿಬ್ಬಂದಿ ಗಾಯಗೊಂಡಿದ್ದಾರೆ. ಟ್ರಾಮಾ ಕೇರ್ ಐಸಿಯು (ICU) ವಿಭಾಗದಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಈ ದುರಂತ ಸಂಭವಿಸಿದ್ದು, ರೋಗಿಗಳನ್ನು ರಕ್ಷಿಸುವ ಯತ್ನದಲ್ಲಿ ಗಾಯಗೊಂಡಿರುವ ಆಸ್ಪತ್ರೆಯ 11 ಸಿಬ್ಬಂದಿ ಸ್ಥಿತಿಯೂ ಗಂಭೀರವಾಗಿದೆ.
ಇಂದು ಬೆಳಗಿನ ಜಾವ ಸುಮಾರು 2:30 ರಿಂದ 3 ಗಂಟೆಯ ನಡುವೆ, ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಮೊದಲ ಬಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ್ದು, ಆಸ್ಪತ್ರೆಯಲ್ಲಿದ್ದ ರೋಗಿಗಳು ಮತ್ತು ಅವರ ಸಂಬಂಧಿಕರು ಏನು ಮಾಡಬೇಕೆಂದು ತೋಚದೇ ಭಯಭೀತರಾಗಿದ್ದು, ಇಡೀ ಆಸ್ಪತ್ರೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಲವಾರು ಇಂಜಿನ್‌ಗಳ ಸಹಾಯದೊಂದಿಗೆ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದರು.
ಘಟನೆಯ ಕುರಿತು ಮಾಹಿತಿ ನೀಡಿದ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು, “ಐಸಿಯುನಲ್ಲಿದ್ದ 23 ರೋಗಿಗಳನ್ನು ತಕ್ಷಣವೇ ಬೇರೆ ವಿಭಾಗಗಳಿಗೆ ಸ್ಥಳಾಂತರಿಸಲಾಗಿದೆ. ಆದರೆ, ಸ್ಥಳಾಂತರದ ವೇಳೆ ಗಂಭೀರ ಸ್ಥಿತಿಯಲ್ಲಿದ್ದ 7 ರೋಗಿಗಳು ಮೃತಪಟ್ಟರೆ, ಉಳಿದ ಮೂವರು ರೋಗಿಗಳು ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ,” ಎಂದು ತಿಳಿಸಿದ್ದಾರೆ. ರೋಗಿಗಳನ್ನು ಬೆಂಕಿಯ ಜ್ವಾಲೆಯಿಂದ ರಕ್ಷಿಸಲು ಶ್ರಮಿಸಿದ 11 ಸಿಬ್ಬಂದಿಗೆ ಸುಟ್ಟ ಗಾಯಗಳಿಗೆ ಒಳಗಾಗಿದ್ದು, ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಪರಿಹಾರ ಘೋಷಣೆ
ಘಟನೆ ನಡೆದ ಬೆನ್ನಲ್ಲೇ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮತ್ತು ಆರೋಗ್ಯ ಸಚಿವ ಮುಕೇಶ್ ಮಹಾಲಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ ಮುಖ್ಯಮಂತ್ರಿಗಳು, ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.
ಇದನ್ನೂ ಓದಿ : ದುಬೈ ಏರ್‌ಪೋರ್ಟ್ ಬಳಿ ಇರಾನ್ ಡ್ರೋನ್ ದಾಳಿ.. ತೈಲ ಟ್ಯಾಂಕರ್‌ಗೆ ಬೆಂಕಿ, ವಿಮಾನ ಸಂಚಾರ ಸ್ಥಗಿತ!


















