ಬೆಂಗಳೂರು : ಆಧಾರ್ ಕಾರ್ಡ್ ದೇಶದ ಜನರ ಪ್ರಮುಖ ಗುರುತಿನ ಚೀಟಿಯಾಗಿದೆ. ಸರ್ಕಾರದ ಯೋಜನೆಗಳ ಲಾಭ ಪಡೆಯುವುದರಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವುದು ಸೇರಿ ಹಲವು ಕಡೆ ಆಧಾರ್ ಕಾರ್ಡ್ ಪ್ರಮುಖವಾಗಿದೆ. ಇಂತಹ ಆಧಾರ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ ಸೇರಿ ಹಲವು ತಿದ್ದುಪಡಿ ಮಾಡಲು ಅವಕಾಶವಿದೆ. ಆದರೆ, ಅದಕ್ಕೆ ಕೇಂದ್ರ ಸರ್ಕಾರವು ಮಿತಿಯನ್ನು ಹೇರಿದೆ ಎಂಬುದನ್ನು ಪ್ರತಿಯೊಬ್ಬರೂ ಗಮನಿಸಬೇಕಾದ ಸಂಗತಿಯಾಗಿದೆ.
ಹೌದು, ಆಧಾರ್ ನಿಯಮಗಳ ಪ್ರಕಾರ, ಯಾವುದೇ ಒಬ್ಬ ವ್ಯಕ್ತಿಯು ಜೀವನದಲ್ಲಿ ಎರಡು ಬಾರಿ ಮಾತ್ರ ಆಧಾರ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿ ಅಥವಾ ಬದಲಾವಣೆ ಮಾಡಬಹುದಾಗಿದೆ. ಒಂದು ವೇಳೆ ನೀವು ಈಗಾಗಲೇ ಎರಡು ಬಾರಿ ಹೆಸರು ಬದಲಾಯಿಸಿದ್ದು, ಮೂರನೇ ಬಾರಿ ಬದಲಾವಣೆ ಮಾಡಬೇಕಿದ್ದರೆ ಅದು ಸಾಮಾನ್ಯ ಪ್ರಕ್ರಿಯೆಯಲ್ಲಿ ಸಾಧ್ಯವಿಲ್ಲ.
ಆಗ ನೀವು, ನೀವು UIDAI ಪ್ರಾದೇಶಿಕ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ ಅಥವಾ ಇಮೇಲ್ ಮೂಲಕ ವಿನಂತಿ ಮಾಡಬಹುದಾಗಿದೆ. ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ವಿಶೇಷ ಅನುಮತಿಯೊಂದಿಗೆ ತಿದ್ದುಪಡಿ ಮಾಡಬಹುದು.ಹಾಗೆಯೇ, ಆಧಾರ್ ಕಾರ್ಡ್ ನಲ್ಲಿ ಜನ್ಮದಿನಾಂಕವನ್ನು ಒಮ್ಮೆ ಮಾತ್ರ ಬದಲಿಸಬಹುದು. ಇನ್ನು ಎಷ್ಟು ಬಾರಿ ಬೇಕಾದರೂ ವಿಳಾಸವನ್ನು ಬದಲಿಸಬಹುದಾಗಿದೆ. ಮೊಬೈಲ್ ನಂಬರ್, ಇ-ಮೇಲ್ ಐಡಿ, ಫೋಟೋ, ಬಯೋಮೆಟ್ರಿಕ್ ತಿದ್ದುಪಡಿಗಳಿಗೂ ಯಾವುದೇ ಮಿತಿಯನ್ನು ಹೇರಿಲ್ಲ.
ಹೆಸರು ಬದಲಾವಣೆಗೆ ಬೇಕಾಗುವ ದಾಖಲೆಗಳು
ಹೆಸರು ಬದಲಾವಣೆ, ವಿಳಾಸ ತಿದ್ದುಪಡಿಗೆ ಹಲವು ದಾಖಲೆಗಳು ಬೇಕಾಗುತ್ತವೆ. ಪ್ಯಾನ್ ಕಾರ್ಡ್, ಪಾಸ್ ಪೋರ್ಟ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಾಹನ ಚಾಲನಾ ಪರವಾನಗಿ, ಮದುವೆ ಪ್ರಮಾಣಪತ್ರ (ಮದುವೆ ನಂತರ ಹೆಸರು ಬದಲಾಯಿಸಲು) ಬೇಕಾಗುತ್ತದೆ.
ಇದನ್ನೂ ಓದಿ : ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆಗೆ ಮಹೂರ್ತ ಫಿಕ್ಸ್ – ಮತದಾನ, ಫಲಿತಾಂಶ ಯಾವಾಗ?



















