ಬೆಂಗಳೂರು: ಬಿಇಎಲ್ ಲೇಔಟ್‌ನಲ್ಲಿ ಹೊಂಬೇಗೌಡರ ಮನೆಯಲ್ಲಿ ನಡೆದಿದ್ದ ರಾಬರಿ ಪ್ರಕರಣಕ್ಕೆ ಸಂಬಂಧಿಸಿ, ಹೊಸ ತಿರುವು ಸಿಕ್ಕಿದೆ. ಪ್ರಾಣ ಸ್ನೇಹಿತನ ಮನೆಯಲ್ಲೇ ದರೋಡೆ ಮಾಡಿಸಿದ ಆರೋಪದಲ್ಲಿ ಸ್ಟಾಂಪ್ ವೆಂಡರ್‌ನನ್ನು ಪೊಲೀಸರು ಬಂಧಿಸಿದ್ದರು. ಬಂಧಿತನನ್ನು ಬೆಟ್ಟೇಗೌಡ (52) ಎಂದು ಗುರುತಿಸಲಾಗಿದೆ. ಇದೀಗ ಈ ಪ್ರಕರಣದಲ್ಲಿ ಸತ್ಯ ಹೊರಬಿದ್ದಿದೆ.
ತನಿಖೆಯಲ್ಲಿ ಬೆಟ್ಟೇಗೌಡನೇ ಸೂತ್ರಧಾರನಾಗಿದ್ದಾನೆ ಎಂಬುದು ಬಹಿರಂಗವಾಗಿದೆ. ಘಟನೆಯಲ್ಲಿ ಪೊಲೀಸ್ ವೇಷದಲ್ಲಿ ಮನೆಗೆ ಬರುತ್ತಿರುವ ವ್ಯಕ್ತಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆ ವ್ಯಕ್ತಿಯ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕಿ ತನಿಖೆ ಮುಂದುವರೆಸಿದರು. ಆಗ ಹೊಂಬೇಗೌಡ ತಮ್ಮ ಬಳಿ ಸೈಟ್ ಮಾರಾಟದ ಹಣ ಇಟ್ಟುಕೊಂಡಿದ್ದಾರೆ ಎಂದು ತಿಳಿದಿದ್ದ ಬೆಟ್ಟೇಗೌಡ ದರೋಡೆ ಪ್ಲಾನ್ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ.
ಈ ಸಂಬಂಧ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ನಾಗೇಂದ್ರನಿಗೆ ಕರೆ ಮಾಡಿ ಹೊಂಬೇಗೌಡ ಮನೆಯಲ್ಲಿ ಹಣ ಇದೆ ಎಂದು ತಿಳಿಸಿ ದರೋಡೆ ಮಾಡಲು ಸೂಚಿಸಿದ್ದಾನೆ ಎನ್ನಲಾಗಿದೆ. ಬಳಿಕ ನಾಗೇಂದ್ರ ಶಿವಾಜಿನಗರದಲ್ಲಿ ಶೂಟಿಂಗ್‌ಗೆಂದು ಹೇಳಿ ಸಬ್ ಇನ್ಸ್‌ಪೆಕ್ಟರ್ ಡ್ರೆಸ್‌ನ್ನು ಬಾಡಿಗೆಗೆ ಪಡೆದು ಪೊಲೀಸ್ ವೇಷದಲ್ಲಿ ಹೊಂಬೇಗೌಡ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿದ್ದಾನೆ.
ಈ ಆರೋಪಿಗಳು ಈ ಹಿಂದೆ ಕೂಡ ಹೊಂಬೇಗೌಡರಿಂದ ಸುಮಾರು 20 ಲಕ್ಷ ರೂಪಾಯಿ ವಸೂಲಿ ಮಾಡಿದ್ದರೂ ಭಯದಿಂದ ಅವರು ದೂರು ನೀಡಿರಲಿಲ್ಲ ಎಂದು ತಿಳಿದುಬಂದಿದೆ. ನಂತರ ಈ ಪ್ರಕರಣ ಬೆಳಕಿಗೆ ಬಂದಾಗ ವಿಚಾರಣೆ ವೇಳೆ ಈ ವಿಷಯವನ್ನು ಹೊಂಬೇಗೌಡ ಪೊಲೀಸರಿಗೆ ತಿಳಿಸಿದ್ದಾರೆ.
ಇದೀಗ ಈಗಾಗಲೇ ನಾಗೇಂದ್ರ ಹಾಗೂ ಬಚ್ಚನ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ಪ್ರಕರಣದ ಸೂತ್ರಧಾರನೆಂದು ಹೇಳಲಾಗುತ್ತಿರುವ ಸ್ಟಾಂಪ್ ವೆಂಡರ್ ಬೆಟ್ಟೇಗೌಡನನ್ನೂ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಬಂಧಿತರಿಂದ ಸುಮಾರು 570 ಗ್ರಾಂ ಚಿನ್ನಾಭರಣ ಮತ್ತು 14 ಲಕ್ಷ ರೂಪಾಯಿ ನಗದುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : 13 ವರ್ಷಗಳ ನರಕಯಾತನೆಗೆ ಶೀಘ್ರ ಮುಕ್ತಿ.. ಗಾಜಿಯಾಬಾದ್ ಯುವಕನಿಗೆ ದಯಾಮರಣ ಕಲ್ಪಿಸಿದ ಸುಪ್ರೀಂಕೋರ್ಟ್



















