ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಆರು ತಿಂಗಳ ಕಾಲ ಸ್ಕೆಚ್ ಹಾಕಿ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ರಾಜಸ್ಥಾನ ಮೂಲದ ವೇಲಾರಾಮ್ (19) ಎಂದು ಗುರುತಿಸಲಾಗಿದೆ. ಈ ಘಟನೆ ಜ್ಯುಡಿಷಿಯಲ್ ಲೇಔಟ್ ನಲ್ಲಿ ನಡೆದಿದೆ. ಮನೆ ಮಾಲೀಕರಾದ ದಂಪತಿ ಅಮೆರಿಕಾದಲ್ಲಿ ನೆಲೆಸಿದ್ದು, ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಮಾತ್ರ ಬೆಂಗಳೂರಿನ ಮನೆಗೆ ಬಂದು ಹೋಗುತ್ತಿದ್ದರು. ಈ ವೇಳೆ ಪಕ್ಕದ ನಿರ್ಮಾಣ ಹಂತದ ಕಟ್ಟಡದಲ್ಲಿ ರಾಜಸ್ಥಾನ ಮೂಲದವ ಸುಮಾರು ಇಪ್ಪತ್ತು ಮಂದಿ ಯುವಕರು ಗ್ರಾನೈಟ್ ಹಾಗೂ ಟೈಲ್ಸ್ ಅಳವಡಿಸುವ ಕೆಲಸ ಮಾಡುತ್ತಿದ್ದರು. ಇವರಲ್ಲೊಬ್ಬನಾದ ವೇಲಾರಾಮ್ ಟೈಲ್ಸ್ ಕಟ್ ಮಾಡುವ ಕೆಲಸ ಮಾಡುತ್ತಿದ್ದ.
ಈ ನಡುವೆ ಪಕ್ಕದ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ವೇಲಾರಾಮ್ ಗಮನಿಸಿ ಆರು ತಿಂಗಳ ಕಾಲ ಮನೆಯ ಮೇಲೆ ನಿಗಾವಹಿಸಿದ್ದ. ಮೂರು ಬಾರಿ ಮನೆಯ ಮೇಲ್ಛಾವಣಿಗೆ ಹೋಗಿ ಸ್ಲೈಡ್ ಡೋರ್ ತೆರೆಯುವ ಪ್ರಯತ್ನ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಒಂದು ದಿನ ಸ್ನೇಹಿತರಿಗೆ ತಿಳಿಸದೇ ಸ್ಲೈಡ್ ಡೋರ್ ಮೂಲಕ ಮನೆ ಒಳಗೆ ಪ್ರವೇಶಿಸಿದ ಆತ, ಲಾಕರ್ ತೆರೆಯಿಸಿ ಸುಮಾರು 1 ಕೆಜಿ 800 ಗ್ರಾಂ ಚಿನ್ನಾಭರಣ, ಡೈಮಂಡ್ ಹಾಗೂ ನಗದು ಸೇರಿ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ಬ್ಯಾಗ್‌ನಲ್ಲಿ ತುಂಬಿಕೊಂಡು ಪರಾರಿಯಾಗಿದ್ದ.
ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಚಿನ್ನಾಭರಣ ಸಿಕ್ಕ ಹಿನ್ನೆಲೆಯಲ್ಲಿ ಯಾರಿಗೂ ತಿಳಿಸದೆ ನೇರವಾಗಿ ರಾಜಸ್ಥಾನಕ್ಕೆ ತೆರಳಿ ಮನೆಯಲ್ಲೇ ಅದನ್ನು ಬಚ್ಚಿಟ್ಟಿದ್ದ ಎಂದು ತಿಳಿದುಬಂದಿದೆ. ಈ ನಡುವೆ ಮನೆಯ ಸಿಸಿಟಿವಿ ದೃಶ್ಯಗಳನ್ನು ಅಮೆರಿಕಾದಲ್ಲಿದ್ದ ದಂಪತಿ ಮೊಬೈಲ್ ಮೂಲಕ ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಬಳಿಕ ಸಂಬಂಧಿಕರ ಮೂಲಕ ಪೊಲೀಸರಿಗೆ ದೂರು ನೀಡಲಾಗಿದೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ನಡೆಸಿದ ಯಲಹಂಕ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಹಿರಿಯ ನಟ ದ್ವಾರಕೀಶ್ ಸೊಸೆ ವಿರುದ್ಧ ಚೀಟಿಂಗ್ ಕೇಸ್ | ಚೀಟಿ ಹೆಸ್ರಲ್ಲಿ ಲಕ್ಷ ಲಕ್ಷ ವಂಚನೆ ಆರೋಪ



















