ರಾಯಚೂರು : ಮನೆ ಕಟ್ಟಡದ ಕಾಮಗಾರಿ ವೇಳೆ ಮೆಟ್ಟಿಲು ಕುಸಿದು ಬಿದ್ದ ಪರಿಣಾಮ ಗಂಡ-ಹೆಂಡತಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಯಲಗಟ್ಟ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ದ್ಯಾವಪ್ಪ (45) ಹಾಗೂ ಶಿವಮ್ಮ (35) ಮೃತಪಟ್ಟ ದಂಪತಿಗಳೆಂದು ಗುರುತಿಸಲಾಗಿದೆ.
ಕಳೆದ ಮೂರು ತಿಂಗಳಿಂದ ಯಲಗಟ್ಟ ಗ್ರಾಮದಲ್ಲಿ ಗಾರೆ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಈ ದಂಪತಿ, ಸೋಮವಾರ ಮನೆ ಕಟ್ಟಡದ ಮುಂಭಾಗದಲ್ಲಿ ಗೋಡೆ ಕಟ್ಟುವ ಕೆಲಸದಲ್ಲಿ ತೊಡಗಿಕೊಂಡಿದ್ದರು. ಈ ವೇಳೆ, ಏಕಾಏಕಿ ಮೆಟ್ಟಿಲು ಕುಸಿದು ಬಿದ್ದಿದೆ. ಅದೇ ಸಮಯದಲ್ಲಿ ಟೆರಸ್ ಮೇಲಿದ್ದ ಪತ್ನಿ ಶಿವಮ್ಮ ಅವರ ಮೇಲೂ ಮೆಟ್ಟಿಲು ಬಿದ್ದ ಪರಿಣಾಮ, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ವಿಷಯ ತಿಳಿದ ತಕ್ಷಣ ಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲಿಂಗಸುಗೂರು ಆಸ್ಪತ್ರೆಗೆ ರವಾನಿಸಲಾಗಿದೆ. ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಇದನ್ನೂ ಓದಿ : 13,000 ಕಿಲೋಮೀಟರ್, 11 ದಿನ ನಿರಂತರ ಹಾರಾಟ.. ವಿಶ್ವ ದಾಖಲೆ ಬರೆದ ಅಚ್ಚರಿಯ ಹಕ್ಕಿ!



















