ಆನೇಕಲ್ : ನಿನ್ನೆ(ಮಾ.8) ಕಿಡ್ನ್ಯಾಪ್ ಆಗಿದ್ದ ಗೋಪಾಲ್ ಇಂದು ತಮಿಳುನಾಡಿನ ಡೆಂಕಣಿಕೋಟೆ ಸಮೀಪ ಶವವಾಗಿ ಪತ್ತೆಯಾಗಿರುವ ಘಟನೆ ಭಾರೀ ಸಂಚಲನ ಮೂಡಿಸಿದೆ. ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಗೋಪಾಲ್‌ನನ್ನು ಕಿಡ್ನ್ಯಾಪ್ ಮಾಡಿ ಕಾರಿನಲ್ಲಿ ಕರೆದೊಯ್ದು, ಬಳಿಕ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಮೋಹನ್ ಬಾಬು ಎಂಬಾತ ಕೊಲೆಗೆ ಸುಪಾರಿ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕಿಡ್ನ್ಯಾಪ್ ಮಾಡಿದ ಬಳಿಕ ಆರೋಪಿಗಳು ಗೋಪಾಲ್ ನನ್ನು ಡೆಂಕಣಿಕೋಟೆ ಬಳಿ ಕರೆದೊಯ್ದು ಹತ್ಯೆಗೈದಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಗೋಪಾಲ್ ಸಾವಿಗೆ ಆಕ್ರೋಶ ವ್ಯಕ್ತಪಡಿಸಿರುವ ಕುಟುಂಬಸ್ಥರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಆನೇಕಲ್ ಪೊಲೀಸ್ ಠಾಣೆ ಮುಂಭಾಗ ಕುಟುಂಬಸ್ಥರು ರಸ್ತೆ ತಡೆದು ಕುಳಿತು ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ ಕುಟುಂಬಸ್ಥರು, ಪೊಲೀಸರ ವೈಫಲ್ಯವೇ ಗೋಪಾಲ್ ಸಾವಿಗೆ ಕಾರಣ ಎಂದು ಆರೋಪಿಸಿದರು. ಘಟನಾ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಏನಿದು ಘಟನೆ?
ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಕರ್ಪೂರು ಗೇಟ್ ಬಳಿ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಗೋಪಾಲ್‌ನನ್ನು ಕಿಡ್ನ್ಯಾಪ್ ಮಾಡಿದ್ದರು. ಈತನೊಂದಿಗೆ ಸ್ನೇಹಿತ ಸತೀಶ್ ಕೂಡ ಇದ್ದಿದ್ದು, ಅತ್ತಿಬೆಲೆಯಿಂದ ಕಾರಿನಲ್ಲಿ ಆನೇಕಲ್ ಕಡೆ ಹೋಗುತ್ತಿದ್ದರು. ಈ ವೇಳೆ ಕರ್ಪೂರು ಗೇಟ್ ಬಳಿ ಟಾಟಾ ಏಸ್ ವಾಹನದಿಂದ ಕಾರಿಗೆ ಡಿಕ್ಕಿ ಹೊಡೆದು ಬಳಿಕ ಮತ್ತೊಂದು ಕಾರಿನಲ್ಲಿ ಬಂದ ತಂಡ ಗೋಪಾಲ್ ಮತ್ತು ಸತೀಶ್ ಮೇಲೆ ಸ್ಪ್ರೇ ಹಾಕಿ ಗೋಪಾಲ್‌ನನ್ನು ಕಿಡ್ನ್ಯಾಪ್ ಮಾಡಿದ್ದರು.
ಗೋಪಾಲ್ ರಿಯಲ್ ಎಸ್ಟೇಟ್ ಹಾಗೂ ಹಣಕಾಸು ವ್ಯವಹಾರ ಮಾಡುತ್ತಿದ್ದರು ಎನ್ನಲಾಗಿದೆ. ಬಳಿಕ ಸತೀಶ್ ಈ ಬಗ್ಗೆ ಗೋಪಾಲ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಚರಣೆ ಕೈಗೊಂಡಾಗ ಗೋಪಾಲ್ ಶವವಾಗಿ ಪತ್ತೆಯಾಗಿರುವುದು ತಿಳಿದುಬಂದಿದೆ.
ಇದನ್ನೂ ಓದಿ : ರೈಲಿಗೆ ತಲೆಕೊಟ್ಟ ವ್ಯಕ್ತಿ ಪ್ರಕರಣಕ್ಕೆ ಟ್ವಿಸ್ಟ್!



















