ತುಮಕೂರು : ಗಂಡ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ನಾಟಕವಾಡಿ ಅಂತ್ಯಕ್ರಿಯೆ ಮಾಡಿದ ಬಳಿಕ 20 ದಿನಗಳಲ್ಲೇ ಪತ್ನಿ ಮತ್ತೊಬ್ಬನೊಂದಿಗೆ ಮದುವೆಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಒಂದು ತಿಂಗಳ ಬಳಿಕ ಗಂಡ ಕೊಲೆಯಾಗಿರುವುದು ಬಯಲಾಗಿದೆ. ಈ ಘಟನೆ ತುಮಕೂರು ತಾಲ್ಲೂಕಿನ ಹೆಬ್ಬೂರು ಸಮೀಪದ ದಾಸರಹಳ್ಳಿ ಗ್ರಾಮದಲ್ಲಿನಡೆದಿದೆ. ಪರಮೇಶ್ ಎಂಬಾತನನ್ನು ಪತ್ನಿ ಆಶಾ ಮತ್ತು ಆಕೆಯ ಗೆಳೆಯ ಚಂದ್ರಪ್ಪ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಜನವರಿ 30ರಂದು ನಡೆದ ಈ ಘಟನೆಯಲ್ಲಿ ಪರಮೇಶ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಪತ್ನಿ ಕಥೆ ಕಟ್ಟಿದ್ದಳು. ಬಳಿಕ ಸಂಬಂಧಿಕರ ಸಮ್ಮುಖದಲ್ಲೇ ತುರ್ತಾಗಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಆದರೆ, ಪತಿ ಸಾವಿನ ಕೇವಲ 20 ದಿನಗಳಲ್ಲೇ ಆಶಾ ತನ್ನ ಗೆಳೆಯ ಚಂದ್ರಪ್ಪನೊಂದಿಗೆ ಮದುವೆಯಾದ ಹಿನ್ನೆಲೆಯಲ್ಲಿ ಪರಮೇಶ್ ಸಹೋದರಿಯರಿಗೆ ಅನುಮಾನ ಉಂಟಾಯಿತು. ಇದರಿಂದ ಅವರು ಪೊಲೀಸರಿಗೆ ದೂರು ನೀಡಿದ್ದರು.
ದೂರು ಹಿನ್ನೆಲೆಯಲ್ಲಿ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಹಸೀಲ್ದಾರ್ ಸಮ್ಮುಖದಲ್ಲಿ ಹೂತಿಟ್ಟಿದ್ದ ಪರಮೇಶ್ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಶವದಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ತನಿಖೆ ಮುಂದುವರಿಸಲಾಯಿತು.
ಈ ನಡುವೆ ಆರೋಪಿಗಳನ್ನು ವಿಚಾರಣೆ ನಡೆಸಿದ ವೇಳೆ ಪರಮೇಶ್ ಸಾವಿನ ಹಿಂದೆ ಚಂದ್ರಪ್ಪನ ಪಾತ್ರವಿರುವುದು ಪತ್ತೆಯಾಯಿತು. ಬಳಿಕ ವಿಚಾರಣೆ ವೇಳೆ ಇಬ್ಬರೂ ಆರೋಪಿಗಳು ಮೌಖಿಕವಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಗಳಾದ ಆಶಾ ಮತ್ತು ಚಂದ್ರಪ್ಪರನ್ನು ಹೆಬ್ಬೂರು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಆ್ಯಪಲ್‌ನಿಂದ ಅಚ್ಚರಿಯ ಕೊಡುಗೆ.. ಕೇವಲ 69,900 ರೂ.ಗೆ ಅತ್ಯಂತ ಅಗ್ಗದ ‘ಮ್ಯಾಕ್‌ಬುಕ್ ನಿಯೋ’ ಬಿಡುಗಡೆ!



















