ಬೆಂಗಳೂರು: ತಡರಾತ್ರಿ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ಮೇಲೆ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಘಟನೆ ಬುಧವಾರ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಜಾಲಹಳ್ಳಿ ಬಳಿ ನಡೆದಿದ್ದು, ಬಿಎಂಟಿಸಿ ಡಿಪೋ ನಂ.16ಕ್ಕೆ ಸೇರಿದ ಕೆಎ-51 AK 7333 ಸಂಖ್ಯೆಯ ಇವಿ ಬಸ್ಸಿನ ಚಾಲಕ ಮಲ್ಲಿಕಾರ್ಜುನ್ ವಿರುದ್ಧ ಪ್ರಯಾಣಿಕನು ದೂರು ನೀಡಿದ್ದಾರೆ.
ಮಾಹಿತಿ ಪ್ರಕಾರ, ಜಾಲಹಳ್ಳಿಯಿಂದ ಬಾಗಲಗುಂಟೆಗೆ ಪ್ರಯಾಣಿಸಲು ಪ್ರಯಾಣಿಕನು ಟಿಕೆಟ್ ಪಡೆದಿದ್ದಾನೆ. ಆದರೆ ಬಸ್ ಹತ್ತುವ ವೇಳೆ ಬಸ್ಸಿನಲ್ಲಿ ಚಿಕ್ಕಬಾಣಾವರ ಬೋರ್ಡ್ ಹಾಕಲಾಗಿತ್ತು ಎಂದು ಪ್ರಯಾಣಿಕ ಆರೋಪಿಸಿದ್ದಾರೆ. ನಂತರ ಬಸ್ಸಿನಲ್ಲಿ ಹತ್ತಿದ ಬಳಿಕ ಬಾಗಲಗುಂಟೆ ಲಾಸ್ಟ್ ಸ್ಟಾಪ್ಎಂದು ಹೇಳಿದ ವಿಚಾರವನ್ನು ಪ್ರಶ್ನಿಸಿದ್ದಕ್ಕೆ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗಿದೆ.
ಇದೇ ವೇಳೆ ಚಾಲಕ ತನ್ನ ಐಡಿ ನಂ.655 ಎಂದು ಹೇಳಿಕೊಂಡು ನಿನ್ನಿಂದ ಏನೂ ಮಾಡೋಕೆ ಆಗಲ್ಲ, ನನ್ನಿಂದ ಏನನ್ನೂ ಕಿತ್ಕೊಳ್ಳಲು ಆಗಲ್ಲ ಎಂದು ಧಮ್ಕಿ ನೀಡಿದ ಆರೋಪವೂ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಯಾಣಿಕನು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಯಾಣಿಕರ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಅಡುಗೆ ವಿಚಾರಕ್ಕೆ ಅತ್ತೆ-ಸೊಸೆ ಗಲಾಟೆ.. ಮನನೊಂದು ಸೊಸೆ ಆತ್ಮಹತ್ಯೆ!



















