ಚಿಕ್ಕಮಗಳೂರು : ಇರಾನ್ ಮತ್ತು ಇಸ್ರೇಲ್ ನಡುವಿನ ತೀವ್ರ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಹೆಚ್ಚಾಗಿದೆ. ಈ ಉದ್ವಿಗ್ನತೆಯಿಂದಾಗಿ ವಾಯುಯಾನ ಸ್ಥಗಿತಗೊಂಡಿದ್ದು, ಕನ್ನಡಿಗರು ಸೇರಿದಂತೆ ಹಲವು ಭಾರತೀಯರು ಸಿಲುಕಿಕೊಂಡಿದ್ದಾರೆ.
ಈ ಮಧ್ಯೆ ಬದುಕು ಕಟ್ಟಿಕೊಳ್ಳಲು ಇರಾನ್ಗೆ ಹೋಗಿದ್ದ ಕನ್ನಡಿಗನೋರ್ವ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ. ಮಗನ ಸುಳಿವು ಸಿಗದೆ ಪೋಷಕರು, ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ.
ಹೌದು.. ಚಿಕ್ಕಮಗಳೂರು ಕೊಪ್ಪದ ಹಿರೇಕೊಡಿಗೆ ನಿವಾಸಿ ನಿಶ್ಚಿತ್ 6 ತಿಂಗಳ ಹಿಂದಷ್ಟೇ ಉದ್ಯೋಗ ನಿಮಿತ್ತ ಇರಾನ್ಗೆ ಹೋಗಿದ್ದರು. ಇದೀಗ ಇರಾನ್ನಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ. ಇರಾನ್ನಲ್ಲಿರುವ ಮಗ ಕೆಲ ದಿನಗಳಿಂದ ಒಂದೇ ಒಂದು ಫೋನ್ ಮಾಡಿಲ್ಲ, ಮಗನ ಸುಳಿವು ಸಿಗ್ತಿಲ್ಲ ಎಂದು ಪೋಷಕರು ಕಂಗಾಲಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ನಿಶ್ಚಿತ್ ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು, ಯುದ್ಧ ಪೀಡಿತ ಪ್ರದೇಶದಲ್ಲಿ ಅವರ ಸ್ಥಿತಿ ಏನಾಗಿದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಮಗನ ಸುರಕ್ಷತೆಯ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ ಹಿರೇಕೊಡಿಗೆ ಗ್ರಾಮದಲ್ಲಿ ಮೌನ ಆವರಿಸಿದೆ.ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ವಿದೇಶಾಂಗ ಇಲಾಖೆಯ ಮೂಲಕ ನಿಶ್ಚಿತ್ ಅವರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಭಾರತಕ್ಕೆ ಕರೆತರಬೇಕು ಎಂದು ಕುಟುಂಬದವರು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.
ಇದನ್ನೂ ಓದಿ : 1 ಲಕ್ಷ ಲಂಚಕ್ಕೆ ಬೇಡಿಕೆ.. ರೆಡ್ ಹ್ಯಾಂಡ್ ಆಗಿ ‘ಲೋಕಾ’ ಬಲೆಗೆ ಬಿದ್ದ PSI & ASI



















