ಚಿತ್ರದುರ್ಗ | ಮನೆಗಳಲ್ಲಿ ಅತ್ತಿಗೆ-ನಾದಿನಿಯರು ಸಣ್ಣಪುಟ್ಟ ವಿಚಾರಕ್ಕೂ ಜಗಳವಾಡುವುದು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಈ ಗ್ರಾಮದಲ್ಲಿ ಈ ಇಬ್ಬರು ಊರ ದೇವಸ್ಥಾನದ ಮುಂದೆ ಜಾತ್ರೆಯಲ್ಲಿ ಡಿಚ್ಚಿ ಹೊಡೆದುಕೊಂಡು ಜಗಳ ಮಾಡುತ್ತಾರೆ.
ಹೌದು.. ಗ್ರಾಮ ದೇವರ ಜಾತ್ರೆಯಲ್ಲಿ ಟಗರು ಕಾಳಗದಂತೆ ಅತ್ತಿಗೆ-ನಾದಿನಿಯರ ತಲೆ-ತಲೆಗೆ ಹಿಡಿದು ಡಿಚ್ಚಿ ಹೊಡೆದು ದೇವರ ಸಮ್ಮುಖ ಹಳೆಯ ವೈಮನಸ್ಸು ಮರೆಯುವ ವಿಶಿಷ್ಟ ಆಚರಣೆಯೊಂದನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ CN ಮಾಳಿಗೆ ಗ್ರಾಮದಲ್ಲಿ ಆಚರಿಸಲಾಗುತ್ತದೆ.
ಶ್ರೀ ವೀರಗಾರಸ್ವಾಮಿ ಹಾಗೂ ಅಹೋಬಲ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಬುಡಕಟ್ಟು ಸಮುದಾಯವೊಂದು ಈ ವಿಶೇಷ ಆಚರಣೆಯನ್ನು ಪಾಲಿಸುತ್ತದೆ. ಜಾತ್ರೆಯಲ್ಲಿ ಡಿಚ್ಚಿ ಹೊಡೆಯದಿದ್ರೆ ಹೆಣ್ಣು ಮಕ್ಕಳಿಗೆ ತಲೆ ನೋವು ಬರುತ್ತೆ ಎಂಬ ನಂಬಿಕೆ ಕೂಡ ಇದೆ. ಮದುವೆಯಾಗಿ ಹೋದ ಹೆಣ್ಣು ಮಕ್ಕಳು ಅತ್ತಿಗೆಯರೊಂದಿಗೆ ಆದ ವೈಮನಸ್ಸು ಮರೆಯಲು ವಿಶಿಷ್ಟ ಆಚರಣೆ ಇದಾಗಿದ್ದು, ಈ ಡಿಚ್ಚಿ ಆಚರಿಸಿದರೆ ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎನ್ನುವುದು ಗ್ರಾಮಸ್ಥರ ನಂಬಿಕೆಯಾಗಿದೆ.
ಜಾತ್ರಾ ಮಹೋತ್ಸವ ಪ್ರಯುಕ್ತ ಗ್ರಾಮಸ್ಥರು ಮಣೇವು ಆಚರಣೆ ಮಾಡುತ್ತಾರೆ. ಮಣೇವು ಮೂಲಕ ಸಕ್ಕರೆ ಬಾಳೆಹಣ್ಣು, ಹಂಚಿ ಹರಕೆ ತೀರಿಸುತ್ತಾರೆ ಹಾಗೂ ಕುರಿಗಳಿಂದ ಅಹೋಬಲ ನರಸಿಂಹ ಸ್ವಾಮಿಗೆ ಪ್ರದಕ್ಷಿಣೆ ಹಾಕಿಸಿ, ಗ್ರಾಮದ ಜನರಿಗೆ ರೋಗ-ರುಜಿನ ಬಾರದಿರಲಿ ದೇವರಲ್ಲಿ ಪ್ರಾರ್ಥಿಸಲಾಗುತ್ತದೆ.
ದೇವರ ಅಲಂಕಾರ
ಜಾತ್ರೆಯ ಅಂಗವಾಗಿ ಶ್ರೀ ವೀರಗಾರಸ್ವಾಮಿ ಹಾಗೂ ಶ್ರೀ ಅಹೋಬಲ ನರಸಿಂಹಸ್ವಾಮಿಯನ್ನು ವಿವಿಧ ಬಣ್ಣ ಬಣ್ಣದ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನದ ಮುಂಭಾಗಕ್ಕೆ ಹಸಿರು ಚಪ್ಪರ ಹಾಕಿ ಶೃಂಗರಿಸಲಾಗಿತ್ತು, ಮಂಗಳವಾದ್ಯಗಳು ಮೊಳಗಿದವು. ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ಜನ ಡಿಚ್ಚಿ ಹಬ್ಬದಲ್ಲಿ ಪಾಲ್ಗೊoಡು ಸಂಭ್ರಮಿಸಿದರು.
ಇದನ್ನೂ ಓದಿ : ಕಾಡಿಗೆ ಬೆಂಕಿ.. ಹೊತ್ತಿ ಉರಿದ ವನ್ಯಜೀವಿ, ಕಾಡು ಮರಗಳು



















