ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯ ರಾಜಕಾರಣದಲ್ಲಿ ಅಚ್ಚರಿಯ ಬದಲಾವಣೆಯೊಂದು ಸಂಭವಿಸಿದೆ. ಎಐಎಡಿಎಂಕೆಯ ಮಾಜಿ ಸಮನ್ವಯಕಾರ ಹಾಗೂ ಮಾಜಿ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ (ಒಪಿಎಸ್) ಅವರು ಇಂದು ತಮ್ಮ ದಶಕಗಳ ಕಾಲದ ರಾಜಕೀಯ ವೈರಿ ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಚೆನ್ನೈನಲ್ಲಿರುವ ಡಿಎಂಕೆ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸಮ್ಮುಖದಲ್ಲಿ ಅವರು ಪಕ್ಷದ ಸದಸ್ಯತ್ವ ಪಡೆದರು.
ಮಾತೃಸಂಸ್ಥೆಗೆ ಮರಳಿದ ಒಪಿಎಸ್: ಸ್ಟಾಲಿನ್ ಸ್ವಾಗತ
ಪನ್ನೀರ್ ಸೆಲ್ವಂ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಎಂ.ಕೆ. ಸ್ಟಾಲಿನ್, “ಒಪಿಎಸ್ ಅವರು ತಮ್ಮ ಮಾತೃಸಂಸ್ಥೆಗೆ ಮರಳಿದ್ದಾರೆ” ಎಂದು ಬಣ್ಣಿಸಿದರು. “ದ್ರಾವಿಡ ಸಿದ್ಧಾಂತವನ್ನು ಉಳಿಸುವ ಈ ಹೋರಾಟಕ್ಕೆ ಪನ್ನೀರ್ ಸೆಲ್ವಂ ಅವರನ್ನು ಮುಕ್ತ ಹೃದಯದಿಂದ ಸ್ವಾಗತಿಸುತ್ತೇನೆ. ಅವರು ವಿನಯವಂತ ಮತ್ತು ಸದ್ಗುಣಶೀಲ ವ್ಯಕ್ತಿ. 2026ರ ವಿಧಾನಸಭಾ ಚುನಾವಣೆ ಎಂಬುದು ತಮಿಳುನಾಡು ಮತ್ತು ಫ್ಯಾಸಿಸ್ಟ್ ಬಿಜೆಪಿ ನಡುವಿನ ಪ್ರಜಾಪ್ರಭುತ್ವದ ಯುದ್ಧವಾಗಿದೆ. ಈ ಅರಿವಿನೊಂದಿಗೆ ಹಲವು ಶಕ್ತಿಗಳು ಡಿಎಂಕೆ ಮೈತ್ರಿಕೂಟಕ್ಕೆ ಸೇರುತ್ತಿವೆ,” ಎಂದು ಸ್ಟಾಲಿನ್ ಎಕ್ಸ್ (X) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಎಐಎಡಿಎಂಕೆಯೊಂದಿಗಿನ ಸುದೀರ್ಘ ಸಂಬಂಧಕ್ಕೆ ತಿಲಾಂಜಲಿ
ಜಯಲಲಿತಾ ಅವರ ಅತ್ಯಂತ ವಿಶ್ವಾಸಾರ್ಹ ನಾಯಕರಾಗಿದ್ದ ಒಪಿಎಸ್, ಮೂರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಆದರೆ, 2022ರಲ್ಲಿ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಅವರೊಂದಿಗಿನ ತೀವ್ರ ಅಧಿಕಾರ ಸಂಘರ್ಷದ ನಂತರ ಅವರನ್ನು ಎಐಎಡಿಎಂಕೆಯಿಂದ ಉಚ್ಚಾಟಿಸಲಾಗಿತ್ತು. ಅಂದಿನಿಂದ ಕಾನೂನು ಹೋರಾಟ ನಡೆಸುತ್ತಿದ್ದ ಅವರು, ಇತ್ತೀಚೆಗಷ್ಟೇ ಎಐಎಡಿಎಂಕೆ ನಿಯಮಗಳಲ್ಲಿ ಮಾಡಲಾದ ಬದಲಾವಣೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. “ನನ್ನ ತಪ್ಪು ಏನು ಎಂದು ಸಾಬೀತುಪಡಿಸಿದರೆ ರಾಜಕೀಯವನ್ನೇ ಬಿಡುತ್ತೇನೆ” ಎಂದು ಸವಾಲು ಹಾಕಿದ್ದ ಅವರು, ಇಂದು ಅಂತಿಮವಾಗಿ ಡಿಎಂಕೆ ತೆಕ್ಕೆಗೆ ಜಾರಿದ್ದಾರೆ.
2026ರ ಕಣದಲ್ಲಿ ಬದಲಾದ ಸಮೀಕರಣ
ಒಪಿಎಸ್ ಅವರ ಈ ನಡೆ ಮುಂಬರುವ 2026ರ ವಿಧಾನಸಭಾ ಚುನಾವಣೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಈಗಾಗಲೇ ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ನೇತೃತ್ವದ ‘ದ್ರಾವಿಡ ಮಾಡೆಲ್ 2.0’ ಆಡಳಿತವಿದ್ದು, ಇನ್ನೊಂದೆಡೆ ಇಪಿಎಸ್ ನೇತೃತ್ವದ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಇದೆ. ಇವರ ನಡುವೆ ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಪ್ರವೇಶಿಸಿರುವುದರಿಂದ ಸ್ಪರ್ಧೆಯು ತ್ರಿಕೋನವಾಗುವ ಲಕ್ಷಣಗಳಿವೆ. ಇಂತಹ ಸಂದರ್ಭದಲ್ಲಿ ಒಪಿಎಸ್‌ರಂತಹ ಪ್ರಭಾವಿ ನಾಯಕ ಡಿಎಂಕೆ ಸೇರಿರುವುದು ಆಡಳಿತ ಪಕ್ಷಕ್ಕೆ ದೊಡ್ಡ ಬಲ ನೀಡಿದಂತಾಗಿದೆ.
ಮಗನ ಬೆನ್ನಲ್ಲೇ ತಂದೆಯ ಆಗಮನ
ವಿಶೇಷವೆಂದರೆ, ಒಪಿಎಸ್ ಅವರು ಪಕ್ಷ ಸೇರುವ ಮೊದಲೇ ಅವರ ಪುತ್ರ ರವೀಂದ್ರನ್ ಅವರು ಡಿಎಂಕೆ ಕಚೇರಿಗೆ ತಲುಪಿದ್ದರು. ಹೋಟೆಲ್ ಒಂದರಿಂದ ನೇರವಾಗಿ ಅಣ್ಣಾ ಅರಿವಾಲಯಂಗೆ (ಡಿಎಂಕೆ ಕಚೇರಿ) ಆಗಮಿಸಿದ ಒಪಿಎಸ್ ಅವರನ್ನು ಸ್ಟಾಲಿನ್ ಪ್ರೀತಿಯಿಂದ ಬರಮಾಡಿಕೊಂಡರು. ಎಐಎಡಿಎಂಕೆಯಲ್ಲಿ ತಮಗೆ ಉಂಟಾದ ಅವಮಾನ ಮತ್ತು ಪಕ್ಷದ ಸಂಸ್ಥಾಪಕ ಎಂಜಿಆರ್ ಅವರ ಆಶಯಗಳಿಗೆ ವಿರುದ್ಧವಾಗಿ ನಡೆಯುತ್ತಿರುವ ಬದಲಾವಣೆಗಳೇ ತಾವು ಪಕ್ಷ ಬದಲಿಸಲು ಕಾರಣ ಎಂದು ಪನ್ನೀರ್ ಸೆಲ್ವಂ ಸೂಚ್ಯವಾಗಿ ತಿಳಿಸಿದ್ದರು.
ಇದನ್ನೂ ಓದಿ : ಕೊಲೆ ಕೇಸಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ | ಜಾಮೀನು ಮಂಜೂರು



















