ಲಕ್ನೋ : ತಂದೆಯನ್ನು ಮಗನೇ ಕೊಂದು ಸೋದರಿಯ ಮುಂದೆಯೇ ಹಲವು ತುಂಡುಗಳಾಗಿ ಕತ್ತರಿಸಿ ಎಸೆದ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಉದ್ಯಮಿ ಮಾನವೇಂದ್ರ ಸಿಂಗ್ ಹತ್ಯೆ ಪ್ರಕರಣವು ದಿನಕ್ಕೊಂದು ಆಘಾತಕಾರಿ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಗ ಅಕ್ಷತ್ ಪ್ರತಾಪ್ ಸಿಂಗ್ ತನ್ನ ತಂದೆಯನ್ನು ಗುಂಡಿಕ್ಕಿ ಕೊಂದಿದ್ದಲ್ಲದೆ, ಸಾಕ್ಷ್ಯ ನಾಶಪಡಿಸಲು ಸಿನಿಮೀಯ ಮಾದರಿಯಲ್ಲಿ ನಡೆಸಿದ ಸಂಚುಗಳು ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿವೆ. ಕೇವಲ ಕ್ಷುಲ್ಲಕ ವಿಚಾರಕ್ಕೆ ನಡೆದಿದ್ದು ಎನ್ನಲಾದ ಈ ಕೊಲೆ, ಈಗ ಅತ್ಯಂತ ವ್ಯವಸ್ಥಿತವಾದ ‘ಕೋಲ್ಡ್ ಬ್ಲಡೆಡ್ ಮರ್ಡರ್’ ಆಗಿ ಹೊರಹೊಮ್ಮುತ್ತಿದೆ.
ಬ್ಲಿಂಕಿಟ್ ಮೂಲಕ ಚಾಕುಗಳ ಖರೀದಿ
ಪೊಲೀಸ್ ತನಿಖೆಯ ವೇಳೆ ಆರೋಪಿ ಅಕ್ಷತ್ ನೀಡಿರುವ ಹೇಳಿಕೆಗಳು ದಂಗುಬಡಿಸುವಂತಿವೆ. ಕೊಲೆ ಮಾಡುವುದಕ್ಕೆ ಒಂದು ದಿನ ಮುಂಚಿತವಾಗಿ ಆತ ಆನ್‌ಲೈನ್ ಡೆಲಿವರಿ ಆ್ಯಪ್ ‘ಬ್ಲಿಂಕಿಟ್’ (Blinkit) ಮೂಲಕ ಎರಡು ಚಾಕುಗಳನ್ನು ಆರ್ಡರ್ ಮಾಡಿದ್ದ. ತಂದೆಯನ್ನು ಕೊಂದ ನಂತರ ದೇಹವನ್ನು ತುಂಡು ಮಾಡಲು ಈ ಚಾಕುಗಳನ್ನು ಬಳಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ದೇಹದ ಭಾಗಗಳನ್ನು ತುಂಬಲು ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್ ಮತ್ತು ಮಾಂಸ ಕತ್ತರಿಸುವ ಗರಗಸವನ್ನು ಮಾರುಕಟ್ಟೆಯಿಂದ ಖರೀದಿಸಿ ತಂದಿದ್ದ ಎನ್ನಲಾಗಿದೆ.
ರಕ್ತಸಿಕ್ತ ಗೋಡೆಗೆ ಬಣ್ಣದ ಲೇಪನ!
ಫೆ.20ರಂದು ಬೆಳಗಿನ ಜಾವ ನಡೆದ ಗುಂಡಿನ ದಾಳಿಯಿಂದ ಕೊಠಡಿಯ ಗೋಡೆಗಳಿಗೆ ರಕ್ತದ ಕಲೆಗಳು ಚಿಮ್ಮಿದ್ದವು. ಇದನ್ನು ಅಳಿಸಲು ಆರೋಪಿ ಅಕ್ಷತ್ ತಕ್ಷಣವೇ ಮಾರುಕಟ್ಟೆಯಿಂದ ಪೇಂಟ್ ಖರೀದಿಸಿ ತಂದು, ರಕ್ತ ಮೆತ್ತಿದ್ದ ಗೋಡೆಯ ಭಾಗಗಳಿಗೆ ಬಣ್ಣವನ್ನೂ ಹಚ್ಚಿದ್ದಾನೆ. ಸಾಕ್ಷ್ಯ ನಾಶಪಡಿಸಲು ರಕ್ತದಿಂದ ಒದ್ದೆಯಾಗಿದ್ದ ಬೆಡ್‌ಶೀಟ್, ಬ್ಲಾಂಕೆಟ್ ಮತ್ತು ದಿಂಬುಗಳನ್ನು ಚೀಲದಲ್ಲಿ ತುಂಬಿ ಕಾಲುವೆಯ ಬಳಿ ಸುಟ್ಟು ಹಾಕಿದ್ದಾನೆ. ವಿಧಿವಿಜ್ಞಾನ ತಂಡವು ಈಗ ಆ ಸುಟ್ಟ ಬಟ್ಟೆಗಳ ಅವಶೇಷಗಳನ್ನು ವಶಪಡಿಸಿಕೊಂಡಿದೆ.
‘ಪಾಪಾ ಲೌಟ್ ಆವೋ’ ಎಂಬ ವಾಟ್ಸಾಪ್ ಗ್ರೂಪ್
ತನ್ನ ಮೇಲೆ ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ಅಕ್ಷತ್ ಚಾಣಾಕ್ಷತನ ಮೆರೆದಿದ್ದ. ತಂದೆಯ ನಾಪತ್ತೆಯ ಬಗ್ಗೆ ನಾಟಕವಾಡಲು ‘ಪಾಪಾ ಲೌಟ್ ಆವೋ’ (ಅಪ್ಪಾ ವಾಪಸ್ ಬನ್ನಿ) ಎಂಬ ಹೆಸರಿನ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿದ್ದ. ಅದರಲ್ಲಿ ತಂದೆಯ ಸ್ನೇಹಿತರನ್ನು ಸೇರಿಸಿ, ಭಾವನಾತ್ಮಕ ಸಂದೇಶಗಳನ್ನು ಹಾಕುತ್ತಿದ್ದ. ತಾನೇ ಖುದ್ದಾಗಿ ಸ್ನೇಹಿತರ ಜೊತೆ ಸೇರಿ ತಂದೆಯನ್ನು ಹುಡುಕುವ ನಾಟಕವಾಡುತ್ತಿದ್ದರೂ, ಒಳಗೊಳಗೆ ಎಲ್ಲರ ಮೇಲೂ ಕಣ್ಗಾವಲು ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಹೋದರಿಯ ನಿಗೂಢ ಮೌನ
ಈ ಪ್ರಕರಣದಲ್ಲಿ ಅಕ್ಷತ್‌ನ ಸಹೋದರಿ ಕೃತಿಯ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗುಂಡು ಹಾರಿದ ಸಮಯದಲ್ಲಿ ಆಕೆ ಅದೇ ಕೊಠಡಿಯಲ್ಲಿದ್ದಳು ಎನ್ನಲಾಗಿದೆ. ಆದರೆ ಸುಮಾರು 24 ಗಂಟೆಗಳ ಕಾಲ ಆಕೆ ಈ ಬಗ್ಗೆ ಯಾರಿಗೂ ಮಾಹಿತಿ ನೀಡದೆ ಮೌನವಾಗಿದ್ದಳು. ಇದು ಭಯದಿಂದ ಉಂಟಾದ ಮೌನವೇ ಅಥವಾ ಆಕೆಗೆ ಮೊದಲೇ ಈ ಸಂಚಿನ ಬಗ್ಗೆ ತಿಳಿದಿತ್ತೇ ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಯುತ್ತಿದೆ. ಮತ್ತೊಂದು ಅಚ್ಚರಿಯೆಂದರೆ, ಮನೆಯ ಬೇರೆ ಮಹಡಿಯಲ್ಲಿ ಮಲಗಿದ್ದ ಇತರ ಸಂಬಂಧಿಕರಿಗೆ ಗುಂಡು ಹಾರಿದ ಶಬ್ದವೇ ಕೇಳಿಸಿಲ್ಲದಿರುವುದು ತನಿಖಾ ತಂಡಕ್ಕೆ ಹಲವು ಪ್ರಶ್ನೆಗಳನ್ನು ಮೂಡಿಸಿದೆ.
ವ್ಯವಹಾರದ ಮೇಲಿನ ವ್ಯಾಮೋಹವೇ ಕೊಲೆಗೆ ಕಾರಣ?
ಹಲವು ಪ್ಯಾಥಾಲಜಿ ಲ್ಯಾಬ್ ಮತ್ತು ಮದ್ಯದ ಮಳಿಗೆಗಳನ್ನು ಹೊಂದಿದ್ದ ಮಾನವೇಂದ್ರ ಸಿಂಗ್, ಮಗ ವೈದ್ಯಕೀಯ ಶಿಕ್ಷಣ ಪಡೆದು ‘ನೀಟ್’ ಪರೀಕ್ಷೆ ಬರೆಯಬೇಕೆಂದು ಬಯಸಿದ್ದರು. ಆದರೆ ಅಕ್ಷತ್‌ಗೆ ತಂದೆಯ ಕೋಟ್ಯಂತರ ರೂಪಾಯಿ ವ್ಯವಹಾರದ ಮೇಲೆ ಕಣ್ಣಿತ್ತು. ಇದೇ ವಿಚಾರವಾಗಿ ತಂದೆ-ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಘಟನೆ ನಡೆದ ದಿನದಂದು ಆದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯಗೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ : ಮೊಬೈಲ್ ಶಾಪ್ ಮಾಲೀಕನಿಗೆ ಅನ್ಯಕೋಮಿನ ಯುವಕ ಚಾಕು ಇರಿತ | ನಾಳೆ ಚಿತ್ರದುರ್ಗ ಬಂದ್‌ಗೆ ಕರೆ



















