ಲಂಡನ್ : ತಮ್ಮ 16ನೇ ವಯಸ್ಸಿನಲ್ಲಿ “ನೀನು ಯಾವತ್ತೂ ತಾಯಿಯಾಗಲು ಸಾಧ್ಯವಿಲ್ಲ” ಎಂಬ ಕಹಿ ಸತ್ಯದ ಆಘಾತವನ್ನು ಕೇಳಿದ್ದ ಮಹಿಳೆಯೊಬ್ಬರು, ಇಂದು ವೈದ್ಯಕೀಯ ಇತಿಹಾಸದಲ್ಲೇ ಮೈಲಿಗಲ್ಲು ಎನ್ನಬಹುದಾದ ಪವಾಡದ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬ್ರಿಟನ್‌ನ ಗ್ರೇಸ್ ಬೆಲ್ ಎಂಬವರು ಮೃತ ದಾನಿಯೊಬ್ಬರಿಂದ ಪಡೆದ ಗರ್ಭಾಶಯದ ಮೂಲಕ ಮಗುವನ್ನು ಹಡೆದಿದ್ದು, ಇದು ಯು.ಕೆ. ವೈದ್ಯಕೀಯ ಇತಿಹಾಸದಲ್ಲಿ ನಡೆದ ಇಂತಹ ಮೊದಲ ಯಶಸ್ವಿ ಪ್ರಕರಣವಾಗಿದೆ.

ಐಟಿ ಪ್ರೋಗ್ರಾಂ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಗ್ರೇಸ್ ಬೆಲ್, ‘ಮೇಯರ್-ರೋಕಿಟಾನ್ಸ್ಕಿ-ಕುಸ್ಟರ್-ಹೌಸರ್’ (MRKH) ಎಂಬ ಅಪರೂಪದ ಸಿಂಡ್ರೋಮ್‌ನೊಂದಿಗೆ ಜನಿಸಿದ್ದರು. ಈ ಪರಿಸ್ಥಿತಿಯಲ್ಲಿ ಮಹಿಳೆಯರಲ್ಲಿ ಗರ್ಭಾಶಯ ಇರುವುದಿಲ್ಲ ಅಥವಾ ಪೂರ್ಣ ಪ್ರಮಾಣದಲ್ಲಿ ಬೆಳೆದಿರುವುದಿಲ್ಲ. ಹದಿಹರೆಯದಲ್ಲೇ ತನಗೆ ಮಕ್ಕಳಾಗುವುದಿಲ್ಲ ಎಂಬ ವಿಷಯ ತಿಳಿದಾಗ ಗ್ರೇಸ್ ಕುಸಿದುಹೋಗಿದ್ದರು. ಆದರೆ, ವೈದ್ಯಕೀಯ ತಂತ್ರಜ್ಞಾನದ ಮೇಲಿನ ನಂಬಿಕೆ ಮತ್ತು ದಾನಿಯೊಬ್ಬರ ಉದಾರತೆ ಇಂದು ಆಕೆಯ ಜೀವನದಲ್ಲಿ ‘ಹ್ಯೂಗೋ ಪಾವೆಲ್’ ಎಂಬ ಮುದ್ದು ಮಗುವನ್ನು ನೋಡುವ ಅದೃಷ್ಟ ಒದಗಿಸಿದೆ.
10 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ
ಗ್ರೇಸ್ ಅವರ ಈ ಸುದೀರ್ಘ ಪ್ರಯಾಣ ಅಷ್ಟು ಸುಲಭದ್ದಾಗಿರಲಿಲ್ಲ. ಜೂನ್ 2024ರಲ್ಲಿ ಆಕ್ಸ್‌ಫರ್ಡ್‌ನ ಚರ್ಚಿಲ್ ಆಸ್ಪತ್ರೆಯಲ್ಲಿ ಸುಮಾರು 10 ಗಂಟೆಗಳ ಕಾಲ ನಡೆದ ಸಂಕೀರ್ಣ ಶಸ್ತ್ರಚಿಕಿತ್ಸೆಯ ಮೂಲಕ ಮೃತ ದಾನಿಯೊಬ್ಬರ ಗರ್ಭಾಶಯವನ್ನು ಗ್ರೇಸ್ ಅವರಿಗೆ ಅಳವಡಿಸಲಾಯಿತು. ಇದಾದ ಕೆಲವು ತಿಂಗಳ ನಂತರ ಲಂಡನ್‌ನ ಲಿಸ್ಟರ್ ಫರ್ಟಿಲಿಟಿ ಕ್ಲಿನಿಕ್‌ನಲ್ಲಿ ಫಲವತ್ತತೆ ಚಿಕಿತ್ಸೆ (Fertility Treatment) ಪಡೆದ ಗ್ರೇಸ್ ಯಶಸ್ವಿಯಾಗಿ ಗರ್ಭ ಧರಿಸಿದರು. ನಂತರ ಲಂಡನ್‌ನ ಕ್ವೀನ್ ಚಾರ್ಲೆಟ್ಸ್ ಮತ್ತು ಚೆಲ್ಸಿಯಾ ಆಸ್ಪತ್ರೆಯಲ್ಲಿ 3.09 ಕೆಜಿ ತೂಕದ ಆರೋಗ್ಯವಂತ ಗಂಡು ಮಗುವಿಗೆ ಅವರು ಜನ್ಮ ನೀಡಿದ್ದಾರೆ.
ತಮಗೆ ಜೀವನದ ಅತ್ಯಂತ ದೊಡ್ಡ ಉಡುಗೊರೆ ನೀಡಿದ ದಾನಿ ಮತ್ತು ಆಕೆಯ ಕುಟುಂಬವನ್ನು ಗ್ರೇಸ್ ನೆನೆಯುತ್ತಾ ಭಾವುಕರಾಗಿದ್ದಾರೆ. “ನನ್ನ ದಾನಿಯ ಬಗ್ಗೆ ನಾನು ಪ್ರತಿದಿನ ಪ್ರಾರ್ಥಿಸುತ್ತೇನೆ. ಆಕೆ ನೀಡಿದ ಈ ಉಡುಗೊರೆಯಿಂದಾಗಿ ನನ್ನ ಜೀವನ ಧನ್ಯವಾಗಿದೆ. ಆಕೆಯ ಒಂದು ಭಾಗ ನನ್ನಲ್ಲಿ ಸದಾ ಜೀವಂತವಾಗಿರುತ್ತದೆ” ಎಂದು ಗ್ರೇಸ್ ಹೇಳಿದ್ದಾರೆ. ಇನ್ನು ದಾನಿಯ ಪೋಷಕರು ಕೂಡ ತಮ್ಮ ಮಗಳ ಸಾವಿನ ನೋವಿನಲ್ಲೂ ಆಕೆಯ ಅಂಗಾಂಗಗಳು ಇತರ ಐದು ಜನರಿಗೆ ಮರುಜೀವ ನೀಡಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ವೈದ್ಯರ ಗೌರವಾರ್ಥ ನಾಮಕರಣ
ಈ ಇಡೀ ವೈದ್ಯಕೀಯ ಸಾಹಸದ ನೇತೃತ್ವ ವಹಿಸಿದ್ದ ‘ವೂಂಬ್ ಟ್ರಾನ್ಸ್‌ಪ್ಲಾಂಟ್ ಯುಕೆ’ ಚಾರಿಟಿಯ ಪ್ರೊಫೆಸರ್ ರಿಚರ್ಡ್ ಸ್ಮಿತ್ ಅವರ ಗೌರವಾರ್ಥವಾಗಿ, ಮಗುವಿಗೆ ಹ್ಯೂಗೋ ‘ರಿಚರ್ಡ್’ ಪಾವೆಲ್ ಎಂದು ಹೆಸರಿಡಲಾಗಿದೆ. ಮಗುವಿನ ಜನನದ ವೇಳೆ ಸ್ವತಃ ಪ್ರೊಫೆಸರ್ ಸ್ಮಿತ್ ಉಪಸ್ಥಿತರಿದ್ದರು. ಈ ಯಶಸ್ಸು ಬಂಜೆತನದ ಸಮಸ್ಯೆಯಿಂದ ಬಳಲುತ್ತಿರುವ ಸಾವಿರಾರು ಮಹಿಳೆಯರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
ಇದನ್ನೂ ಓದಿ : ನಾಗಾವಿ ಯಲ್ಲಮ್ಮ ದೇಗುಲದ ಹುಂಡಿಯಲ್ಲಿ ವಿದೇಶಿ ಕರೆನ್ಸಿ | ಮಲೇಷ್ಯಾದ 18 ನೋಟು, 2 ನಾಣ್ಯ ಪತ್ತೆ



















