ಬೆಂಗಳೂರು : ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) 2026ರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಗಳ ಸ್ಥಳ ನಿಗದಿಗೆ ಸಂಬಂಧಿಸಿದಂತೆ ದೊಡ್ಡ ಇಕ್ಕಟ್ಟಿಗೆ ಸಿಲುಕಿದೆ. ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ಕಾರಣದಿಂದಾಗಿ ಮೂಲ ಯೋಜನೆಗಳು ಬದಲಾಗುವ ಸಾಧ್ಯತೆಗಳಿದ್ದು, ಐಸಿಸಿ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.
ಇತ್ತೀಚಿನ ವರದಿಗಳ ಪ್ರಕಾರ, ಸೂಪರ್ 8 ಹಂತದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದ ಭವಿಷ್ಯ ನಿರ್ಧಾರವಾದ ಬಳಿಕವಷ್ಟೇ ಸೆಮಿಫೈನಲ್ ಸ್ಥಳಗಳನ್ನು ಅಂತಿಮಗೊಳಿಸಲಾಗುತ್ತದೆ. ಒಂದು ವೇಳೆ ಈ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಿದರೆ, ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ.
ಸೆಮಿಫೈನಲ್ ಸ್ಥಳಗಳ ಗೊಂದಲ ಏಕೆ?
ಭಾರತ ಮತ್ತು ಪಾಕಿಸ್ತಾನ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಕಾರಣ, ಪಾಕ್ ತಂಡವು ಪಂದ್ಯಗಳಿಗಾಗಿ ಭಾರತಕ್ಕೆ ಪ್ರಯಾಣಿಸುವುದಿಲ್ಲ. ಹೀಗಾಗಿ ಸ್ಥಳ ಬದಲಾವಣೆ ಅನಿವಾರ್ಯವಾಗಬಹುದು. 2026ರ ಟಿ20 ವಿಶ್ವಕಪ್‌ನ ಸಹ-ಆತಿಥ್ಯ ವಹಿಸಿರುವ ಶ್ರೀಲಂಕಾ ಸೆಮಿಫೈನಲ್ ತಲುಪಿದರೆ, ಅವರು ತವರಿನಲ್ಲಿಯೇ ಆಡುವ ಅವಕಾಶ ಪಡೆಯಬಹುದು. ಆದರೆ, ಭಾರತವೂ ಸೆಮಿಫೈನಲ್‌ಗೆ ಅರ್ಹತೆ ಪಡೆದರೆ, ಮತ್ತು ಭಾರತ-ಪಾಕ್ ಮುಖಾಮುಖಿಯಾಗದಿದ್ದಲ್ಲಿ ಈ ಲೆಕ್ಕಾಚಾರಗಳು ಮತ್ತೆ ಬದಲಾಗಲಿವೆ.
ಕೊಲಂಬೊ ಅಥವಾ ಕೋಲ್ಕತ್ತಾ: ಲೆಕ್ಕಾಚಾರಗಳೇನು?
ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಲಾಜಿಸ್ಟಿಕ್ಸ್ ಸಮಸ್ಯೆಗಳ ಆಧಾರದ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಪ್ರಸ್ತುತ, ಸೆಮಿಫೈನಲ್ ಪಂದ್ಯಗಳ ಸ್ಥಳಗಳು ಮೂರು ಪ್ರಮುಖ ಅಂಶಗಳ ಮೇಲೆ ಅವಲಂಬಿತವಾಗಿವೆ. ಮೊದಲನೇ ಸೆಮಿಫೈನಲ್ ಪಂದ್ಯವನ್ನು ಕೋಲ್ಕತ್ತಾ ಅಥವಾ ಕೊಲಂಬೊದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಒಂದು ವೇಳೆ ಪಾಕಿಸ್ತಾನ ಸೆಮಿಫೈನಲ್‌ಗೆ ಅರ್ಹತೆ ಪಡೆದರೆ, ಮಾರ್ಚ್ 4 ರಂದು ಕೊಲಂಬೊದಲ್ಲಿ ಆ ತಂಡ ಮೊದಲ ಸೆಮಿಫೈನಲ್ ಆಡಲಿದೆ. ಹಾಗೆಯೇ, ಶ್ರೀಲಂಕಾ ಅರ್ಹತೆ ಪಡೆದು, ಭಾರತವನ್ನು ಹೊರತುಪಡಿಸಿ ಬೇರೆ ಯಾವುದೇ ತಂಡವನ್ನು ಎದುರಿಸಬೇಕಾದರೂ ಆ ಮೊದಲ ಸೆಮಿಫೈನಲ್ ಪಂದ್ಯ ಕೊಲಂಬೊದಲ್ಲೇ ನಡೆಯಲಿದೆ. ಇದು ಐಸಿಸಿಯ ಮೂಲ ವೇಳಾಪಟ್ಟಿಯಲ್ಲಿನ ದೊಡ್ಡ ಬದಲಾವಣೆಯಾಗಿದೆ.
ಐಸಿಸಿ ನೀಡಿರುವ ಸುಳಿವಿನ ಪ್ರಕಾರ, ಪಾಕಿಸ್ತಾನ ಮತ್ತು ಶ್ರೀಲಂಕಾ ಎರಡೂ ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಡಲು ವಿಫಲವಾದರೆ, ಎರಡೂ ಸೆಮಿಫೈನಲ್ ಪಂದ್ಯಗಳು ಭಾರತದಲ್ಲೇ (ಕೋಲ್ಕತ್ತಾ ಮತ್ತು ಮುಂಬೈ) ನಡೆಯಲಿವೆ. ಒಂದು ವೇಳೆ ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆದು, ಪಾಕಿಸ್ತಾನವನ್ನು ಹೊರತುಪಡಿಸಿ ಬೇರೆ ತಂಡವನ್ನು ಎದುರಿಸುವುದಾದರೆ, ಟೀಂ ಇಂಡಿಯಾದ ಸೆಮಿಫೈನಲ್ ಪಂದ್ಯ ಮುಂಬೈನಲ್ಲಿ ಆಯೋಜನೆಯಾಗಲಿದೆ.
ಮೂರೂ ತಂಡಗಳು ಅರ್ಹತೆ ಪಡೆಯದಿದ್ದರೆ ಏನಾಗಲಿದೆ?
ಭಾರತ, ಪಾಕಿಸ್ತಾನ, ಅಥವಾ ಶ್ರೀಲಂಕಾ- ಈ ಮೂರೂ ತಂಡಗಳು ಸೆಮಿಫೈನಲ್ ತಲುಪದಿದ್ದರೆ, ಸೂಪರ್-8ರ ‘ಗ್ರೂಪ್ 1’ರಲ್ಲಿ ಅಗ್ರಸ್ಥಾನ ಪಡೆಯುವ ತಂಡವು ‘ಗ್ರೂಪ್ 2’ರ ಎರಡನೇ ಸ್ಥಾನಿ ವಿರುದ್ಧ ಕೋಲ್ಕತ್ತಾದಲ್ಲಿ ಆಡಲಿದೆ. ಹಾಗೆಯೇ ‘ಗ್ರೂಪ್ 2’ರ ವಿಜೇತ ತಂಡವು ‘ಗ್ರೂಪ್ 1’ರ ರನ್ನರ್-ಅಪ್ ವಿರುದ್ಧ ಮುಂಬೈನಲ್ಲಿ ಸೆಣಸಲಿದೆ.
ಅಧಿಕೃತ ಪ್ರಕಟಣೆಯ ಪ್ರಕಾರ, “ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಿದರೆ, ಕೋಲ್ಕತ್ತಾದ ಬದಲು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂ ಮೊದಲ ಸೆಮಿಫೈನಲ್‌ಗೆ ಆತಿಥ್ಯ ವಹಿಸಲಿದೆ. ಪಾಕ್ ತಂಡವು ಫೈನಲ್ ತಲುಪಿದರೆ, ಫೈನಲ್ ಪಂದ್ಯವೂ ಅಹಮದಾಬಾದ್‌ನಿಂದ ಕೊಲಂಬೊಗೆ ಸ್ಥಳಾಂತರಗೊಳ್ಳಲಿದೆ. ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾದರೆ, ಆ ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ. ಆದರೆ, ಭಾರತ ಪಾಕಿಸ್ತಾನವನ್ನು ಹೊರತುಪಡಿಸಿ ಬೇರೆ ಯಾವುದೇ ತಂಡವನ್ನು ಎದುರಿಸುವುದಾದರೆ, ಆ ಪಂದ್ಯ (ಎರಡನೇ ಸೆಮಿಫೈನಲ್) ಮುಂಬೈನಲ್ಲಿ ನಡೆಯಲಿದೆ.
ಇದನ್ನೂ ಓದಿ : ಇನ್ಮುಂದೆ ‘ಕೇರಳ’ ಅಲ್ಲ.. ‘ಕೇರಳಂ’ | ಹೆಸರು ಬದಲಾವಣೆಗೆ ಕೇಂದ್ರ ಒಪ್ಪಿಗೆ!



















