ಬೆಂಗಳೂರು : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11ರಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.
ರಾಜ್ಯ ಸರ್ಕಾರದ ವಿರುದ್ಧ ವೈದ್ಯರು ಸಿಡಿದೆದ್ದಿದ್ದು, ಔಷಧ ಸರಬರಾಜು, ವೈದ್ಯರ ನೇಮಕ, ಬಡ್ತಿ ಸಹಿತ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಮಾರ್ಚ್ 11ರಿಂದ ಮುಷ್ಕರ ಆರಂಭಿಸಲಿದೆ. ಮಾರ್ಚ್ 11ರಿಂದ 15ರವರೆಗೆ ಎಲ್ಲಾ ಜಿಲ್ಲಾ ಆಸ್ಪತ್ರೆ ತಾಲೂಕಾಸ್ಪತ್ರೆ, ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಪ್ಪು ಪಟ್ಟಿ ಧರಿಸಿ ಮುಷ್ಕರ ನಡೆಸಲು ಮುಂದಾಗಿದ್ದಾರೆ.
ಈ ವೇಳೆ ಹೊರರೋಗಿಗಳ (OPD) ಚಿಕಿತ್ಸೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಆನಂತರವೂ ಸರ್ಕಾರ ತಮ್ಮ ನಿಲುವಿನಲ್ಲಿ ಬದಲಾವಣೆ ಕಾಣದಿದ್ದರೆ ಮಾ.16ರಿಂದ ಗೈರಾಗುವ ಮೂಲಕ ಮುಷ್ಕರ ತೀವ್ರಗೊಳಿಸಲು ನಿರ್ಧರಿಸಲಾಗಿದೆ.
ವೈದ್ಯರ ಮುಷ್ಕರದಿಂದ ರೋಗಿಗಳಿಗೆ ಆಗುವ ಪರಿಣಾಮ..
ಅನಿರ್ದಿಷ್ಟಾವಧಿ ಮುಷ್ಕರ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಯಿದೆ. ಮಾರ್ಚ್ 11ರಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾದರೆ, ರೋಗಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಂಡುಕೊಳ್ಳುವುದು ಒಳಿತು.
ತುರ್ತು ಚಿಕಿತ್ಸೆ ಖಾಸಗಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚುವ ಸಾಧ್ಯತೆ ಇದೆ. ಇನ್ನೂ ಮುಷ್ಕರ ಹೂಡಿದವರ ಜೊತೆ ಸರ್ಕಾರ ಹಾಗೂ ವೈದ್ಯರ ಸಂಘದ ನಡುವೆ ಮಾತುಕತೆ ನಡೆಯುವ ಸಾಧ್ಯತೆ ಇದೆ. ಬೇಡಿಕೆಗಳು ಈಡೇರಿದರೆ ಮುಷ್ಕರ ಹಿಂಪಡೆಯುವ ಸೂಚನೆಯೂ ಇದೆ. ರಾಜ್ಯದಲ್ಲಿ “ಹೆಲ್ತ್ ಎಮರ್ಜೆನ್ಸಿ” ಸನ್ನಿವೇಶ ಉಂಟಾಗದಂತೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಇದನ್ನೂ ಓದಿ : ಮೋದಿಗೆ ಬೈಯ್ಯುವವರಿಗೆ ಹೊದಿಕೆ ಇಲ್ಲ | ಮುಸ್ಲಿಂ ಮಹಿಳೆಯರಿಗೆ ಸಹಾಯ ನಿರಾಕರಿಸಿದ ಬಿಜೆಪಿ ಮಾಜಿ ಸಂಸದ



















