ತಮಿಳುನಾಡು | ಭಾರತೀಯ ಚಿತ್ರರಂಗ ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ. ಚಿತ್ರರಂಗದ ಇಬ್ಬರು ದಂತಕಥೆಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಸುಮಾರು 47 ವರ್ಷಗಳ ನಂತರ, ‘KHxRK’ ಎಂದು ತಾತ್ಕಾಲಿಕವಾಗಿ ಹೆಸರಿಸಲಾದ ಪ್ರತಿಷ್ಠಿತ ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ.
ಈ ಇಬ್ಬರು ಮಹಾನ್ ನಟರು ಕೊನೆಯದಾಗಿ 1970ರ ದಶಕದ ಉತ್ತರಾರ್ಧದಲ್ಲಿ ಒಟ್ಟಿಗೆ ನಟಿಸಿದ್ದರು. ಈಗ ದಶಕಗಳ ನಂತರ ಇವರ ಪುನರ್ಮಿಲನವು ಸಮಕಾಲೀನ ಭಾರತೀಯ ಚಲನಚಿತ್ರ ಇತಿಹಾಸದ ಅತ್ಯಂತ ಮಹತ್ವದ ಘಟನೆಗಳಲ್ಲಿ ಒಂದಾಗಿದೆ. ತಲೆಮಾರುಗಳ ಪ್ರೇಕ್ಷಕರನ್ನು ರಂಜಿಸಿದ ಮತ್ತು ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಇಬ್ಬರು ದಿಗ್ಗಜರ ಪರಂಪರೆಯ ಸಂಗಮ ಇದಾಗಿದೆ.
ರೆಡ್ ಜೈಂಟ್ ಮೂವೀಸ್ (Red Giant Movies) ಸಂಸ್ಥೆಯು ಈ ಐತಿಹಾಸಿಕ ಸಾಹಸಕ್ಕೆ ಕೈಹಾಕಿದ್ದು, ಈ ಇಬ್ಬರು ಸಿನಿಮಾ ದೈತ್ಯರನ್ನು ಒಂದೇ ಪರದೆಯ ಮೇಲೆ ತರುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರವನ್ನು ಅದ್ಧೂರಿತನ, ಪರಂಪರೆ ಮತ್ತು ಅತ್ಯುತ್ತಮ ಕಥೆ ಹೇಳುವಿಕೆಯ ಸಂಭ್ರಮವಾಗಿ ನಿರ್ಮಾಣ ಮಾಡಲು ಸಂಸ್ಥೆ ಯೋಜಿಸಿದೆ.

ಈ ಕುರಿತು ರೆಡ್ ಜೈಂಟ್ ಮೂವೀಸ್‌ನ ವಕ್ತಾರರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. “ರಜನಿಕಾಂತ್ ಸರ್ ಮತ್ತು ಕಮಲ್ ಹಾಸನ್ ಸರ್ ಅವರನ್ನು ಈ ಚಿತ್ರಕ್ಕಾಗಿ ಒಂದೆಡೆ ಸೇರಿಸಿರುವುದು ರೆಡ್ ಜೈಂಟ್ ಮೂವೀಸ್‌ನ ನಮ್ಮೆಲ್ಲರ ಪಾಲಿಗೆ ನಿಜಕ್ಕೂ ಕನಸು ನನಸಾದ ಕ್ಷಣ. 47 ವರ್ಷಗಳ ನಂತರ ಈ ಪುನರ್ಮಿಲನಕ್ಕೆ ವೇದಿಕೆ ಕಲ್ಪಿಸುತ್ತಿರುವುದಕ್ಕೆ ನಮಗೆ ಹೆಮ್ಮೆ, ಕೃತಜ್ಞತೆ ಮತ್ತು ಅಪಾರ ಉತ್ಸಾಹವಿದೆ. ಇದು ಭಾರತೀಯ ಚಿತ್ರರಂಗಕ್ಕೆ ಒಂದು ಐತಿಹಾಸಿಕ ಮತ್ತು ಭಾವುಕ ಕ್ಷಣವಾಗಿದ್ದು, ನಾವು ಈ ಪ್ರಯಾಣವನ್ನು ಜವಾಬ್ದಾರಿಯಿಂದ ಪ್ರಾರಂಭಿಸುತ್ತಿದ್ದೇವೆ. ಅವರ ಪರಂಪರೆಯನ್ನು ಅತ್ಯಂತ ಶಕ್ತಿಯುತವಾಗಿ ಬಿಂಬಿಸುವ ಸಿನಿಮಾ ಅನುಭವವನ್ನು ನೀಡಲು ನಾವು ಬದ್ಧರಾಗಿದ್ದೇವೆ.”
‘ಜೈಲರ್’ ನಂತಹ ಬ್ಲಾಕ್‌ಬಸ್ಟರ್ ಯಶಸ್ಸನ್ನು ನೀಡಿದ ಖ್ಯಾತ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಬೃಹತ್ ಪ್ರಮಾಣದ ಚಿತ್ರಗಳಿಗೆ ತಮ್ಮ ಅದ್ಭುತ ಸಂಗೀತದ ಮೂಲಕ ಜೀವ ತುಂಬುವ ಅನಿರುದ್ಧ್ ರವಿಚಂದರ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಸದ್ಯಕ್ಕೆ ಗೌಪ್ಯವಾಗಿಡಲಾಗಿದ್ದು, ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು. ಖಂಡಿತವಾಗಿಯೂ ಇದು ಅಭಿಮಾನಿಗಳಿಗೆ ಹಬ್ಬದ ಸುದ್ದಿಯೇ ಸರಿ.
ಇದನ್ನೂ ಓದಿ : ಕಾಂಗ್ರೆಸ್ ‘ಅರೆಬೆತ್ತಲೆ’ ಪ್ರತಿಭಟನೆಗೆ ಬಿಜೆಪಿ ತಿರುಗೇಟು | ರಾಹುಲ್ ಗಾಂಧಿಗೆ ಕಪ್ಪು ಬಾವುಟ ಪ್ರದರ್ಶನ



















