ಮೈಸೂರು : ಪ್ರವಾಸಕ್ಕೆ ತೆರಳಲು ಅನುಮತಿ ಕೊಡದ ಹಿನ್ನೆಲೆಯಲ್ಲಿ ಗೃಹಿಣಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾರೆಂಬ ಆರೋಪವೊಂದು ಕೇಳಿ ಬಂದಿದೆ.
ಈ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ. ಗೃಹಿಣಿ ಸಂಬಂಧಿಕರು ಇದು ಕೊಲೆ ಎಂದು ಆರೋಪಿಸಿದ್ದಾರೆ. ನಗರದ ಸರಸ್ವತಿಪುರಂನ ನಿವಾಸಿ 46 ವರ್ಷದ ಸಂಧ್ಯಾ ಸಾವನ್ನಪ್ಪಿರುವ ಗೃಹಿಣಿ. ಸಂಧ್ಯಾ ತಮ್ಮ ಮನೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರು ಮೂಲದ ಸಂಧ್ಯಾ 25 ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ರಂಗನಾಥ್ ಎಂಬುವರನ್ನು ಮದುವೆ ಮಾಡಿಕೊಂಡಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಪುತ್ರಿ ವಿದೇಶದಲ್ಲಿದ್ದಾರೆ. ಸಂಧ್ಯಾ ಮನೆಯಲ್ಲಿ ಮಗ ಹಾಗೂ ತಮ್ಮ ಪತಿಯೊಂದಿಗೆ ವಾಸಿಸುತ್ತಿದ್ದಾರೆ.
ಪ್ರವಾಸದ ವಿಚಾರದಲ್ಲಿ ಗಂಡ-ಹೆಂಡತಿ ನಡುವೆ ಜಗಳವಾಗಿದೆ. ಗಂಡ ಮನೆಯಿಂದ ಹೊರ ಹೋದ ನಂತರ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ. ತನ್ನ ಅಕ್ಕನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿರುವ ಸಹೋದರ ಗುರುಮೂರ್ತಿ, ಗಂಡ ಹಾಗೂ ಮಗನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ತಾಯಿಯ ಸಾವಿಗೆ ನನ್ನ ತಂದೆ ಕಾರಣವಲ್ಲ ಎಂದು ಮಗ ಹೇಳಿದ್ದಾನೆ. ಪತಿ ಕೂಡ ಸಾವಿಗೆ ನಾನು ಕಾರಣವಲ್ಲ. ಟೂರ್ ಗೆ ಹೋಗೋ ವಿಚಾರದಲ್ಲಿ ಜಗಳವಾಗಿದ್ದು, ನಿಜ ಆದರೆ ಸಾವಿಗೆ ಅದೇ ಕಾರಣವಲ್ಲ ಎಂದಿದ್ದಾರೆ.
ಇದನ್ನೂ ಓದಿ : ಸಾಕು ನಾಯಿ ವಿಚಾರಕ್ಕೆ ಗಲಾಟೆ | ವೃದ್ಧೆ ಮೇಲೆ ಹಲ್ಲೆ



















