ಅಹಮದಾಬಾದ್ : 2026ರ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಟೀಮ್ ಇಂಡಿಯಾದ ಆಲ್ರೌಂಡರ್ ಶಿವಂ ದುಬೆ, ತಮ್ಮ ಈ ಯಶಸ್ಸಿಗೆ ಕಾರಣರಾದ ವ್ಯಕ್ತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ನೀಡಿದ ಸಲಹೆಯಿಂದಾಗಿ ತಾವು ಶಾರ್ಟ್ ಪಿಚ್ ಎಸೆತಗಳ ದೌರ್ಬಲ್ಯವನ್ನು ಮೆಟ್ಟಿ ನಿಲ್ಲಲು ಸಾಧ್ಯವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 31 ಎಸೆತಗಳಲ್ಲಿ 66 ರನ್ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ದುಬೆ, ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ಶಾರ್ಟ್ ಪಿಚ್ ಎಸೆತಗಳನ್ನು ಎದುರಿಸಲು ಪರದಾಡುತ್ತಿದ್ದೆ ಎಂದು ನೆನಪಿಸಿಕೊಂಡರು.
ಧೋನಿ ನೀಡಿದ ಆ ಸಲಹೆ ಏನು?
“ಐಪಿಎಲ್ ಆರಂಭದ ದಿನಗಳಲ್ಲಿ ಶಾರ್ಟ್ ಬಾಲ್ ಕಂಡರೆ ನನಗೆ ನಡುಕ ಹುಟ್ಟುತ್ತಿತ್ತು. ಅದನ್ನು ಕ್ಲೀನ್ ಆಗಿ ಹೊಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈ ಹಂತದಲ್ಲಿ ಪ್ರಾಬಲ್ಯ ಸಾಧಿಸಬೇಕೆಂದರೆ ಆ ದೌರ್ಬಲ್ಯವನ್ನು ಸರಿಪಡಿಸಿಕೊಳ್ಳಲೇಬೇಕಿತ್ತು. ಆಗ ಮಹಿ ಭಾಯ್ (ಧೋನಿ) ನನಗೆ ಒಂದು ಕಿವಿಮಾತು ಹೇಳಿದರು,” ಎಂದರು.
“ಶಾರ್ಟ್ ಪಿಚ್ ಎಸೆತಕ್ಕೆ ಸಿಕ್ಸರ್ ಹೊಡೆಯಲೇಬೇಕೆಂಬ ನಿಯಮವೇನಿಲ್ಲ. ಬೌಂಡರಿ ಬಾರಿಸಬಹುದು ಅಥವಾ ಸಿಂಗಲ್ ತೆಗೆದುಕೊಂಡರೂ ಸಾಕು ಎಂದು ಧೋನಿ ಹೇಳಿದರು. ಈ ಮಾತು ನನ್ನ ದೃಷ್ಟಿಕೋನವನ್ನೇ ಬದಲಿಸಿತು. ಆಫ್ ಸೀಸನ್‌ನಲ್ಲಿ ಇದರ ಬಗ್ಗೆ ಕಠಿಣ ಅಭ್ಯಾಸ ನಡೆಸಿದೆ,” ಎಂದು ದುಬೆ ವಿವರಿಸಿದರು.
ಸೂಪರ್-8 ಹಂತಕ್ಕೆ ಆನೆಬಲ
ಧೋನಿ ಅವರ ಗರಡಿಯಲ್ಲಿ ಪಳಗಿರುವ ದುಬೆ, ಇದೀಗ ಭಾರತ ತಂಡದ ಪ್ರಮುಖ ಅಸ್ತ್ರವಾಗಿ ಬೆಳೆದಿದ್ದಾರೆ. ನೆದರ್ಲ್ಯಾಂಡ್ಸ್ ವಿರುದ್ಧ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲೂ ಮಿಂಚಿ 2 ವಿಕೆಟ್ ಕಬಳಿಸಿದರು. ಸೂಪರ್-8 ಹಂತದಲ್ಲಿ ಭಾರತ ಪ್ರಶಸ್ತಿ ಉಳಿಸಿಕೊಳ್ಳುವ ಹೋರಾಟದಲ್ಲಿ ದುಬೆ ಅವರ ಫಾರ್ಮ್ ನಿರ್ಣಾಯಕ ಪಾತ್ರ ವಹಿಸಲಿದೆ.
ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಇಬ್ಬರು ಬೀದಿ ಕಾಮಣ್ಣರು ಅಂದರ್!



















