ನವದೆಹಲಿ/ಬೆಂಗಳೂರು : ಚೀನಾದ ರೋಬೋ ನಾಯಿಯನ್ನು ತಾನೇ ತಯಾರಿಸಿದ್ದೆಂದು ಸುಳ್ಳು ಹೇಳಿ ಉತ್ತರಪ್ರದೇಶದ ಗೋಲ್ಗೋತಿಯಾ ವಿಶ್ವವಿದ್ಯಾಲಯವು ದೇಶದ ಮಾನ ಹರಾಜು ಹಾಕಿದ್ದರೆ, ಮತ್ತೊಂದೆಡೆ ಕರ್ನಾಟಕದ ಸ್ಟಾರ್ಟ್ಅಪ್‌ವೊಂದು ಸಂಪೂರ್ಣವಾಗಿ ಭಾರತದಲ್ಲೇ ತಯಾರಾದ ರೊಬೋಟಿಕ್ ನಾಯಿಯ ಮೂಲಕ ಗಮನ ಸೆಳೆಯುತ್ತಿದೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಮೈಲಿಗಲ್ಲನ್ನು ಸಾರುವಂತೆ ಬೆಂಗಳೂರು ಮೂಲದ ‘ಜನರಲ್ ಅಟಾನಮಿ’ (General Autonomy) ಎಂಬ ರೋಬೋಟಿಕ್ಸ್ ಸ್ಟಾರ್ಟ್‌ಅಪ್, ದೇಶೀಯವಾಗಿ ತಯಾರಿಸಲಾದ ‘ಪರಮ್’ ಹೆಸರಿನ ರೋಬೋಟಿಕ್ ನಾಯಿಯನ್ನು (Robodog) ಪರಿಚಯಿಸಿದೆ. ದೆಹಲಿಯಲ್ಲಿ ನಡೆಯುತ್ತಿರುವ ‘ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026’ರಲ್ಲಿ ಈ ರೋಬೋ ನಾಯಿ ಎಲ್ಲರ ಗಮನ ಸೆಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋ ವೈರಲ್ ಆಗಿದೆ.
ಕೇವಲ ಜೋಡಣೆಯಲ್ಲ, ಸಂಪೂರ್ಣ ಭಾರತೀಯ ನಿರ್ಮಿತ
ವಿದೇಶದಿಂದ ಬಿಡಿಭಾಗಗಳನ್ನು ತಂದು ಈ ರೋಬೋ ನಾಯಿಯನ್ನು ಜೋಡಣೆ ಮಾಡಿಲ್ಲ. ಬದಲಾಗಿ, ಭಾರತೀಯ ಇಂಜಿನಿಯರ್‌ಗಳೇ ವಿನ್ಯಾಸಗೊಳಿಸಿ ಸಂಪೂರ್ಣವಾಗಿ ಇದನ್ನು ಅಭಿವೃದ್ಧಿಪಡಿಸಿದ್ದಾರೆ. “ಭಾರತದ ಅತ್ಯಂತ ಶಕ್ತಿಶಾಲಿ ಮತ್ತು ಸ್ವದೇಶಿ ರೋಬೋ ನಾಯಿ ‘ಪರಮ್’ ಅನ್ನು ನಾವು ಪ್ರಸ್ತುತಪಡಿಸುತ್ತಿದ್ದೇವೆ. ಇದು ನಮ್ಮ ದೇಶಕ್ಕಾಗಿ, ನಮ್ಮ ಶತಮಾನಕ್ಕಾಗಿ ಮತ್ತು ನಮ್ಮ ಜಗತ್ತಿಗಾಗಿ ಭಾರತೀಯರೇ ನಿರ್ಮಿಸಿದ ಹೆಮ್ಮೆಯ ಆವಿಷ್ಕಾರ” ಎಂದು ಕಂಪನಿ ಎಕ್ಸ್ (X) ಖಾತೆಯಲ್ಲಿ ಬರೆದುಕೊಂಡಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ‘ಪರಮ್’ ಬೆಂಗಳೂರಿನ ಟ್ರಾಫಿಕ್ ನಡುವೆ ಲೀಲಾಜಾಲವಾಗಿ ನಡೆಯುವುದು, ಮೆಟ್ಟಿಲುಗಳನ್ನು ಹತ್ತುವುದು ಮತ್ತು ಅಡೆತಡೆಗಳನ್ನು ತಾನಾಗಿಯೇ ಗುರುತಿಸಿ ದಾರಿ ಮಾಡಿಕೊಳ್ಳುವುದನ್ನು ಕಾಣಬಹುದು. ಈ ರೋಬೋ ನಾಯಿಯು 30 ಸೆಂ.ಮೀ ಎತ್ತರದ ಮೆಟ್ಟಿಲುಗಳನ್ನು ಹತ್ತಬಲ್ಲದು ಮತ್ತು ಅತ್ಯಂತ ಕಡಿಮೆ ಎತ್ತರದ ಜಾಗಗಳಲ್ಲಿ ತೆವಳುತ್ತಾ ಸಾಗಬಲ್ಲ ಸಾಮರ್ಥ್ಯ ಹೊಂದಿದೆ. ಇದಲ್ಲದೆ, ಆಕಸ್ಮಿಕವಾಗಿ ಬಿದ್ದರೆ ತಾನಾಗಿಯೇ ಎದ್ದು ನಿಲ್ಲುವ ‘ಆಟೋಮ್ಯಾಟಿಕ್ ಫಾಲ್ ರಿಕವರಿ’ ತಂತ್ರಜ್ಞಾನವನ್ನು ಇದು ಒಳಗೊಂಡಿದೆ. ಕಳೆದ ಏಳು ತಿಂಗಳ ನಿರಂತರ ಪರಿಶ್ರಮದಿಂದ ಈ ರೋಬೋಟ್ ಸಿದ್ಧಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ.
ಕಳೆದ ತಿಂಗಳು ನಡೆದ ‘ಸ್ಟಾರ್ಟ್‌ಅಪ್ ಇಂಡಿಯಾ’ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಈ ರೋಬೋ ನಾಯಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಪ್ರದರ್ಶಿಸಲಾಗಿತ್ತು. ಈ ವೇಳೆ ರೋಬೋಟ್‌ನ ಕಾರ್ಯಕ್ಷಮತೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದ ಪ್ರಧಾನಿ ಮೋದಿ ಅವರು, ತಮಾಷೆಯಾಗಿ “ದೆಹಲಿಯ ಚಳಿಯಲ್ಲಿ ಪರಮ್‌ನನ್ನು ಜಾಗರೂಕತೆಯಿಂದ ನೋಡಿಕೊಳ್ಳಿ” ಎಂದು ಸಂಸ್ಥೆಯ ಸಂಸ್ಥಾಪಕರಿಗೆ ಕಿವಿಮಾತು ಹೇಳಿದ್ದರು. ಕೈಗಾರಿಕಾ ತಪಾಸಣೆ, ವಿಪತ್ತು ನಿರ್ವಹಣೆ, ರಕ್ಷಣಾ ಕಾರ್ಯಾಚರಣೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಈ ರೋಬೋ ನಾಯಿಗಳು ಭವಿಷ್ಯದಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆಯಿದೆ.
ಇದನ್ನೂ ಓದಿ : ನಾಗರಹೊಳೆ, ಬಂಡೀಪುರ ಸಫಾರಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ | ಸಿಡಿದೆದ್ದ ರೈತ ಸಂಘಟನೆಗಳು



















