ಬೆಂಗಳೂರು : ನಗರದ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಸಿದು ಓಡುತ್ತಿದ್ದ ಕಳ್ಳನನ್ನು ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ ಒಬ್ಬರು ಸುಮಾರು ಒಂದು ಕಿಲೋಮೀಟರ್ ಬೆನ್ನಟ್ಟಿ ಹಿಡಿದ ಘಟನೆ ನಡೆದಿದೆ.
ಫೆ. 5ರಂದು ದಾಕ್ಷಾಯಣಿ ಎಂಬವರ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದ ಸೈಯದ್ ಜಾಫರ್ ಎಂಬ ಆರೋಪಿಯನ್ನು ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ ಹನುಮಂತ ಪುಟಾಣಿ ಧೈರ್ಯವಾಗಿ ಬೆನ್ನಟ್ಟಿ ಬಂಧಿಸಿದ್ದಾರೆ.
ಆ ದಿನ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಹನುಮಂತ ಪುಟಾಣಿ ಅವರು, ಮಾರ್ಗ ಮಧ್ಯೆ ಮಹಿಳೆಯ ಚಿನ್ನದ ಸರ ಕಸಿದು ಆರೋಪಿ ಓಡುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಸುಮಾರು ಒಂದು ಕಿಲೋಮೀಟರ್ ದೂರ ಓಡಿ ಆರೋಪಿಯನ್ನು ಹಿಡಿದು ತಮ್ಮ ಕರ್ತವ್ಯನಿಷ್ಠೆ ಮೆರೆದಿದ್ದಾರೆ.
ಬಂಧಿತ ಆರೋಪಿಯಿಂದ ಸುಮಾರು 40 ಗ್ರಾಂ ತೂಕದ, ಅಂದಾಜು 6 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಕಾನ್‌ಸ್ಟೇಬಲ್ ಹನುಮಂತ ಪುಟಾಣಿ ಅವರ ಕರ್ತವ್ಯನಿಷ್ಠೆಯನ್ನು ಶ್ಲಾಘಿಸಿದ್ದಾರೆ. ಇತ್ತ, ಸರ ಕಳೆದುಕೊಂಡ ದಾಕ್ಷಾಯಣಿ ಅವರು ಕೂಡ ಪೊಲೀಸ್ ಪೇದೆ ಅವರ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಮೆಚ್ಚಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಎಪ್ಸ್ಟೀನ್ ಫೈಲ್ಸ್‌ನಲ್ಲಿ ಬಯಲಾಯ್ತು ‘ಜಾಂಬಿ’ ಸಸ್ಯದ ರಹಸ್ಯ | ಹಿಂದೂ ಪುರಾಣಗಳಲ್ಲೂ ಇದೆ ಇದರ ಉಲ್ಲೇಖ



















