ಬೆಂಗಳೂರು: ವಿದ್ಯಾರ್ಥಿಗಳ ಹಾಜರಾತಿಯನ್ನು ತಪ್ಪದೇ ದಾಖಲಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, 2026-27ನೇ ಸಾಲಿನಿಂದಲೇ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಫೇಸ್ ರೆಕಾಗ್ನೆಷನ್ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಯಾಗಲಿದೆ.
ಎಐ ಆಧಾರಿತ ತಂತ್ರಜ್ಞಾನ ಮೂಲಕ ಹಾಜರಾತಿ ಕಡ್ಡಾಯಗೊಳಿಸಲಾಗುತ್ತಿದ್ದು, ಒಟ್ಟು 2.16 ಕೋಟಿ ರೂಪಾಯಿ ವೆಚ್ಚದಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಮೇ ತಿಂಗಳೊಳಗೆ ಎಲ್ಲಾ ಶಾಲೆಗಳಲ್ಲಿ ಎಐ ಆಧಾರಿತ ಮೊಬೈಲ್ ಆ್ಯಪ್ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಲಾಗಿದೆ.
ಇದುವರೆಗೆ ಬಳಕೆಯಲ್ಲಿರುವ SATS ತಂತ್ರಾಂಶದೊಂದಿಗೆ ಈ ಹೊಸ ವ್ಯವಸ್ಥೆಯನ್ನು ಸಂಯೋಜಿಸಲಾಗುತ್ತದೆ. ಇದರ ಮೂಲಕ ಮಕ್ಕಳ ಪೋಷಕರು ತಮ್ಮ ಮಕ್ಕಳ ಹಾಜರಾತಿಯನ್ನು ಆನ್‌ಲೈನ್ ಮೂಲಕ ಪರಿಶೀಲಿಸಬಹುದಾಗಿದೆ.
ಮಕ್ಕಳಿಗೆ ಮಾತ್ರವಲ್ಲದೆ, ಇನ್ಮುಂದೆ ಶಿಕ್ಷಕರ ಹಾಜರಾತಿಗೂ ಫೇಸ್ ರೆಕಾಗ್ನೆಷನ್ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಇದರಿಂದ ಶಿಕ್ಷಕರ ಹಾಜರಾತಿ ಕಳ್ಳಾಟಕ್ಕೆ ಬ್ರೇಕ್ ಬೀಳಲಿದ್ದು, ಮಕ್ಕಳಂತೆ ಶಿಕ್ಷಕರೂ ಕೂಡ ಫೇಸ್ ರೆಕಾಗ್ನೆಷನ್ ವ್ಯವಸ್ಥೆಯ ಮೂಲಕವೇ ಹಾಜರಾತಿ ನೀಡಬೇಕು ಎಂದು ಸರ್ಕಾರ ಸೂಚಿಸಿದೆ.
ಈ ಕ್ರಮದಿಂದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಿ, ನಿಯಮಿತ ಹಾಜರಾತಿಗೆ ಉತ್ತೇಜನ ನೀಡುವುದು ಸರ್ಕಾರದ ಉದ್ದೇಶವಾಗಿದೆ.
ಇದನ್ನೂ ಓದಿ : ಚಿಕ್ಕಮಗಳೂರಲ್ಲಿ ಕೋಮು ಘರ್ಷಣೆ | ಹಿಂದೂ ಮನೆ ಮೇಲೆ ನಿರಂತರ ಕಲ್ಲು ತೂರಾಟ


















