ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೊಲೀಸ್ ಯೂನಿಫಾರ್ಮ್ ಧರಿಸಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಗನ್ ಮತ್ತು ಚಾಕು ತೋರಿಸಿ ದರೋಡೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ಬಿಇಎಲ್ ಬಡಾವಣೆಯ ಹೊಂಬಾಳೆಗೌಡ (53) ಅವರ ಮನೆಯಲ್ಲಿ ಈ ದರೋಡೆ ನಡೆದಿದೆ. ಘಟನೆಯ ವೇಳೆ ಮನೆಯಲ್ಲಿ ಹೊಂಬಾಳೆಗೌಡ, ಅವರ ಪತ್ನಿ ಮಂಗಳಮ್ಮ ಹಾಗೂ ಮೊಮ್ಮಗು ಇದ್ದರು ಎನ್ನಲಾಗಿದೆ.
ಖಾಸಗಿ ಕಾರಿನಲ್ಲಿ ಬಂದ ಆರೋಪಿಗಳಲ್ಲಿ ಒಬ್ಬನು ಸಬ್ ಇನ್ಸ್‌ಪೆಕ್ಟರ್ ಯೂನಿಫಾರ್ಮ್ ಧರಿಸಿ ಕೈಯಲ್ಲಿ ಡೈರಿ ಹಿಡಿದು ಮನೆಗೆ ಪ್ರವೇಶಿಸಿದ್ದಾನೆ. ಮತ್ತೊಬ್ಬನು ಕ್ರೈಮ್ ಪಿಸಿ ಮಾದರಿಯಲ್ಲಿ ಬ್ಯಾಗ್ ಹಾಕಿಕೊಂಡು ಒಳನುಗ್ಗಿದ್ದಾನೆ. ತಾವು ಯಲಹಂಕ ಪೊಲೀಸ್ರು ಎಂದು ಹೇಳಿ ಮನೆಗೆ ಪ್ರವೇಶ ಪಡೆದಿದ್ದಾರೆ.
ಮನೆಗೆ ನುಗ್ಗಿದ ಬಳಿಕ ಗನ್ ಮತ್ತು ಚಾಕು ತೋರಿಸಿ ಹೊಂಬಾಳೆಗೌಡರನ್ನು ಲಾಕ್ ಮಾಡಿದ್ದು, ಬಳಿಕ ಅವರಿಗೂ ಮಂಗಳಮ್ಮಗೂ ಟೇಪ್ ಸುತ್ತಿ ಕಟ್ಟಿಹಾಕಿದ್ದಾರೆ. ನಂತರ ಬೆಡ್‌ರೂಮ್ ಜಾಲಾಡಿ ಸುಮಾರು 20 ಲಕ್ಷ ರೂ. ನಗದು ಹಾಗೂ ಅರ್ಧ ಕೆಜಿ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಹೋಗುವಾಗ ಮನೆಯಲ್ಲಿದ್ದ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡು ಹೋಗಿರುವ ಆರೋಪಿಗಳಿಂದ ತಾವೇ ಭಯಗೊಂಡು ಹಣ ಹಾಗೂ ಒಡವೆಗಳನ್ನು ಕೊಟ್ಟಿದ್ದಾಗಿ ಹೊಂಬಾಳೆಗೌಡ ತಿಳಿಸಿದ್ದಾರೆ. ಕೊನೆಗೆ ಪತ್ನಿಯ ಮಾಂಗಲ್ಯ ಬೇಕಾದರೂ ತೆಗೆದುಕೊಂಡು ಹೋಗಿ ಎಂದು ಬೇಡಿಕೊಂಡರೂ, ಆರೋಪಿಗಳು ಮಾಂಗಲ್ಯವನ್ನು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.
ಇನ್ನೂ, ಮನೆದಲ್ಲಿದ್ದ ಸಿಸಿಟಿವಿ ಡಿವಿಆರ್‌ನ್ನೂ ಕಳಚಿಕೊಂಡು ಹೋಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿಸಿಪಿ ನಾಗೇಶ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಬೀದರ್ | ಕಾಲುವೆಯಲ್ಲಿ ಜಾರಿ ಬಿದ್ದು ತಂದೆ-ಮಗ ಸಾವು


















