ಪ್ರತಾಪ್‌ಗಢ: ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯ ಬಾಬುಗಂಜ್ ಮಾರುಕಟ್ಟೆ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ನಡೆದ ಭೀಕರ ಅಪಘಾತದಲ್ಲಿ ಸಮಾಜವಾದಿ ಪಕ್ಷದ ಸ್ಥಳೀಯ ಮುಖಂಡ ಲಾಲ್ ಬಹದ್ದೂರ್ ಯಾದವ್ (48) ಸಾವನ್ನಪ್ಪಿದ್ದಾರೆ. ಪೆಟ್ರೋಲ್ ಬಂಕ್ ಬಳಿ ಸುಮಾರು 65 ಅಡಿ ಎತ್ತರದ ಹೈಮಾಸ್ಟ್ ದೀಪದ ಕಂಬವನ್ನು ಅಳವಡಿಸುತ್ತಿದ್ದಾಗ, ಅದು ನಿಯಂತ್ರಣ ತಪ್ಪಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದ್ದೇ ಈ ದುರಂತಕ್ಕೆ ಕಾರಣ.
ವೃತ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ (PWD) ಗುತ್ತಿಗೆದಾರರಾಗಿದ್ದ ಲಾಲ್ ಬಹದ್ದೂರ್ ಯಾದವ್ ಅವರು ತಮ್ಮ ಹುಂಡೈ ಕ್ರೆಟಾ ಕಾರಿನಲ್ಲಿ ವೈಯಕ್ತಿಕ ಕೆಲಸದ ನಿಮಿತ್ತ ಮಾರುಕಟ್ಟೆಯಿಂದ ನಗರದತ್ತ ತೆರಳುತ್ತಿದ್ದರು. ತಮ್ಮ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿದ್ದ ಪೆಟ್ರೋಲ್ ಬಂಕ್ ಎದುರು ಈ ಘಟನೆ ಸಂಭವಿಸಿದೆ. ಹೈಮಾಸ್ಟ್ ಕಂಬವನ್ನು ಕ್ರೇನ್ ಮೂಲಕ ಎತ್ತಿ ಅಳವಡಿಸುವಾಗ, ಕ್ರೇನ್‌ನ ಪಟ್ಟಿ (Strap) ಹಠಾತ್ತಾಗಿ ತುಂಡಾದ ಪರಿಣಾಮ ಸುಮಾರು 4,000 ಕೆಜಿ (40 ಕ್ವಿಂಟಾಲ್) ತೂಕದ ಭಾರಿ ಕಬ್ಬಿಣದ ಕಂಬ ನೇರವಾಗಿ ಅವರ ಕಾರಿನ ಮೇಲೆ ಬಿದ್ದಿದೆ.
ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ
ಕಂಬ ಬಿದ್ದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಅಪ್ಪಚ್ಚಿಯಾಗಿದ್ದು, ಯಾದವ್ ಅವರು ಸೀಟ್ ಹಾಗೂ ಕಂಬದ ನಡುವೆ ಸಿಲುಕಿಕೊಂಡಿದ್ದರು. ಘಟನೆಯನ್ನು ಕಂಡು ಬೆಚ್ಚಿಬಿದ್ದ ಸ್ಥಳೀಯರು ತಕ್ಷಣವೇ ಧಾವಿಸಿ ಬಂದು, ಕಾರಿನ ಬಾಗಿಲನ್ನು ಮುರಿದು ಅವರನ್ನು ಹೊರತೆಗೆದಿದ್ದಾರೆ. ತಕ್ಷಣವೇ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ, ಅವರು ದಾರಿಯಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಇಡೀ ಘಟನೆಯ ದೃಶ್ಯಗಳು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಈ ಘಟನೆಯು ಅಧಿಕಾರಿಗಳ ಮತ್ತು ಬಂಕ್ ಮಾಲೀಕರ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೊಂದು ಭಾರಿ ಗಾತ್ರದ ಕಂಬವನ್ನು ಅಳವಡಿಸುವಾಗ ವಾಹನ ಸಂಚಾರವನ್ನು ತಡೆಹಿಡಿಯದೇ ಇದ್ದಿದ್ದು ಬೇಜವಾಬ್ದಾರಿತನದ ಪರಮಾವಧಿ ಎನ್ನುವುದು ಮೃತರ ಕುಟುಂಬದವರ ಆರೋಪವಾಗಿದೆ. ಪ್ರತಾಪ್‌ಗಢ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಸುರಕ್ಷತಾ ಕ್ರಮಗಳಲ್ಲಿನ ಲೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೃತ ಲಾಲ್ ಬಹದ್ದೂರ್ ಯಾದವ್ ಅವರು ಪತ್ನಿ, ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಇದನ್ನೂ ಓದಿ : ‘ಐ ಡೋಂಟ್ ಕೇರ್’ | ಅಮೆರಿಕದಲ್ಲಿ ಮೃತಪಟ್ಟ ಕನ್ನಡಿಗ ಸಾಕೇತ್ ಅಂತಿಮ ದಿನಗಳಲ್ಲಿ ಹೀಗೆ ಹೇಳಿದ್ದೇಕೆ?



















