ತಮಿಳಿನ ಸ್ಟಾರ್ ನಟಧನುಷ್ ಜೊತೆ ನಟಿ ಮೃಣಾಲ್ ಠಾಕೂರ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಫೆಬ್ರವರಿ 14ರಂದು ಈ ಜೋಡಿ ಗುಟ್ಟಾಗಿ ವಿವಾಹವಾಗಲಿದ್ದಾರೆ ಎಂಬ ಮಾತುಗಳು ಹರಿದಾಡಿದ್ದವು. ಈ ಬಗ್ಗೆ ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.
ಮರಾಠಿ ಮೂಲದ ಮೃಣಾಲ್ ಠಾಕೂರ್, ದಕ್ಷಿಣ ಭಾರತದಲ್ಲೂ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿಶೇಷವಾಗಿ ತೆಲುಗಿನ ಸೀತಾ ರಾಮನ್ ಸಿನಿಮಾ ಅವರಿಗೆ ದಕ್ಷಿಣದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು. ಪ್ರಸ್ತುತ ಅವರು ದಕ್ಷಿಣ ಹಾಗೂ ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ಇನ್ನೊಂದೆಡೆ, ಧನುಷ್ ಅವರು ಅಶ್ವಿನಿ ರಜನಿಕಾಂತ್ ಅವರೊಂದಿಗೆ 2004ರಲ್ಲಿ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ದೀರ್ಘಕಾಲದ ದಾಂಪತ್ಯ ಜೀವನದ ಬಳಿಕ ಈ ಜೋಡಿ ವಿಚ್ಛೇದನ ಪಡೆದಿರುವುದು ತಿಳಿದುಬಂದಿದೆ.
ವಿಚ್ಛೇದನದ ಬಳಿಕ ಧನುಷ್ ಹೆಸರು ಮೃಣಾಲ್ ಜೊತೆ ಕೇಳಿಬಂದಿದ್ದು, ಇವರಿಬ್ಬರ ಕೆಲವು ಫೋಟೋಗಳು ಸಹ ವೈರಲ್ ಆಗಿ, ಮದುವೆ ಸುದ್ದಿಗೆ ಮತ್ತಷ್ಟು ಬಲ ನೀಡಿದ್ದವು. ಆದರೆ ಈ ಕುರಿತು ಇಬ್ಬರೂ ಮೌನದಲ್ಲಿಯೇ ಇದ್ದರು.
ಇದೀಗ ಹೊಸ ಸಿನಿಮಾದ ಪ್ರಚಾರದ ವೇಳೆ ಮೃಣಾಲ್ ಅವರಿಗೆ ಮದುವೆ ಕುರಿತು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಅವರು, “ಖಂಡಿತವಾಗಿಯೂ ಮದುವೆ ಆಗುವ ಆಸೆ ಇದೆ. ಆದರೆ ಸರಿಯಾದ ಸಮಯ ಬಂದಾಗ ಮತ್ತು ಸರಿಯಾದ ವ್ಯಕ್ತಿ ಜೀವನಕ್ಕೆ ಬಂದಾಗ ಮಾತ್ರ ಮದುವೆ ಸಾಧ್ಯ” ಎಂದು ಹೇಳಿದ್ದಾರೆ. ಈ ಮೂಲಕ ಧನುಷ್ ಜೊತೆ ಮದುವೆ ಎಂಬ ಸುದ್ದಿಗೆ ಮೃಣಾಲ್ ಠಾಕೂರ್ ಪರೋಕ್ಷವಾಗಿ ತೆರೆ ಎಳೆದಿದ್ದಾರೆ.
ಇದನ್ನೂ ಓದಿ : ಮದುವೆ ಸಂಭ್ರಮದ ನಡುವೆ ಕಳ್ಳತನ | ಫೋಟೋಶೂಟ್ ವೇಳೆ ವಧುವಿನ ಬ್ಯಾಗ್ ಎಗರಿಸಿದ ಖದೀಮ!


















