ಇಂದೋರ್ : ಮಧ್ಯಪ್ರದೇಶದ ಇಂದೋರ್‌ನಲ್ಲಿ 24 ವರ್ಷದ ಎಂಬಿಎ ವಿದ್ಯಾರ್ಥಿನಿಯೊಬ್ಬಳ ಕೊಳೆತ ಸ್ಥಿತಿಯಲ್ಲಿದ್ದ ಶವ ಅವಳ ಸಹಪಾಠಿಯ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ. ಈ ಘಟನೆಯು ನಗರದಾದ್ಯಂತ ತಲ್ಲಣ ಮೂಡಿಸಿದ್ದು, ಕೊಲೆಗೂ ಮುನ್ನ ವಿದ್ಯಾರ್ಥಿನಿಯ ಫೋನ್‌ನಿಂದ ಕಾಲೇಜು ವಾಟ್ಸಾಪ್ ಗ್ರೂಪ್‌ಗೆ ಆಕ್ಷೇಪಾರ್ಹ ವಿಡಿಯೋವೊಂದು ಹರಿದಾಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಸಾಕ್ಸ್ ಮೂಲಕ ಮಗಳ ಗುರುತು ಹಿಡಿದ ತಂದೆ
ಸನ್ವೇರ್ ರಸ್ತೆಯ ಖಾಸಗಿ ಕಾಲೇಜಿನಲ್ಲಿ ಎಂಬಿಎ ಮೊದಲ ವರ್ಷದ ವಿದ್ಯಾರ್ಥಿನಿಯಾಗಿದ್ದ ಈಕೆ, ಮಂಗಳವಾರ ಹುಟ್ಟುಹಬ್ಬದ ಪಾರ್ಟಿಗೆ ಹೋಗುವುದಾಗಿ ಮನೆಯಿಂದ ಹೊರಬಂದಿದ್ದರು. ಆದರೆ ಆಕೆ ಮರಳಿ ಮನೆಗೆ ಬಾರದೇ ಇದ್ದಾಗ ಪೋಷಕರು ಪೊಲೀಸರ ಮೊರೆ ಹೋಗಿದ್ದರು. ಶುಕ್ರವಾರ ದ್ವಾರಕಾಪುರಿ ಪ್ರದೇಶದ ಮನೆಯೊಂದರಿಂದ ದುರ್ವಾಸನೆ ಬರುತ್ತಿರುವುದಾಗಿ ಸ್ಥಳೀಯರು ನೀಡಿದ ದೂರಿನ ಮೇರೆಗೆ ಪೊಲೀಸರು ಬಾಗಿಲು ಮುರಿದು ಒಳಹೊಕ್ಕಾಗ ವಿದ್ಯಾರ್ಥಿನಿಯ ನಗ್ನ ಶವ ಪತ್ತೆಯಾಗಿದೆ. ಶವವು ಎಷ್ಟು ಕೊಳೆತು ಹೋಗಿತ್ತೆಂದರೆ, ತಂದೆ ತನ್ನ ಮಗಳನ್ನು ಆಕೆ ಧರಿಸಿದ್ದ ಸಾಕ್ಸ್ ಮೂಲಕ ಮಾತ್ರ ಗುರುತಿಸಲು ಸಾಧ್ಯವಾಯಿತು.
ಆಕ್ಷೇಪಾರ್ಹ ವಿಡಿಯೋ, ಬ್ಲ್ಯಾಕ್‌ಮೇಲ್ ಆರೋಪ
ವಿದ್ಯಾರ್ಥಿನಿ ನಾಪತ್ತೆಯಾದ ರಾತ್ರಿಯೇ ಆಕೆಯ ಮೊಬೈಲ್‌ನಿಂದ ಕಾಲೇಜು ಗ್ರೂಪ್‌ಗೆ ಖಾಸಗಿ ವಿಡಿಯೋವೊಂದು ಅಪ್‌ಲೋಡ್ ಆಗಿತ್ತು. ಈ ವಿಡಿಯೋದಲ್ಲಿ ವಿದ್ಯಾರ್ಥಿನಿಯ ಮುಖ ಸ್ಪಷ್ಟವಾಗಿ ಕಾಣುತ್ತಿದ್ದರೆ, ಮತ್ತೊಬ್ಬ ವ್ಯಕ್ತಿಯ ಮುಖವನ್ನು ಎಮೋಜಿಗಳ ಮೂಲಕ ಮುಚ್ಚಲಾಗಿತ್ತು. ಮೃತಳ ತಂದೆಯ ಆರೋಪದಂತೆ, ಆಕೆಯ ಸಹಪಾಠಿ ಮತ್ತು ಪ್ರಿಯಕರ ಪಿಯೂಷ್ ಧನೋಟಿಯಾ ಈ ಕೃತ್ಯದ ಹಿಂದೆ ಇದ್ದು, ಆಕೆಯನ್ನು ಮಾನಸಿಕವಾಗಿ ಪೀಡಿಸಿ, ಬ್ಲ್ಯಾಕ್‌ಮೇಲ್ ಮಾಡಿ ಅಂತಿಮವಾಗಿ ಉಸಿರುಗಟ್ಟಿಸಿ ಕೊಂದಿದ್ದಾನೆ ಎನ್ನಲಾಗಿದೆ.
ಆರೋಪಿ ಪಿಯೂಷ್ ಪತ್ತೆಗೆ ಬಲೆ ಬೀಸಿದ ಪೊಲೀಸರು
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ವಿದ್ಯಾರ್ಥಿನಿಯ ಕುತ್ತಿಗೆಯ ಮೇಲೆ ಹಗ್ಗದಿಂದ ಬಿಗಿದಂಥ ಗುರುತುಗಳಿದ್ದು, ಆಕೆಯನ್ನು ಹತ್ಯೆ ಮಾಡಿ ಸುಮಾರು ಮೂರು ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿ ಪಿಯೂಷ್ ಧನೋಟಿಯಾ ಸದ್ಯ ನಾಪತ್ತೆಯಾಗಿದ್ದು, ಮೂಲತಃ ಮಂದಸೌರ್‌ನವನಾದ ಆತ ಇಂದೋರ್‌ನಲ್ಲಿ ಎಂಬಿಎ ಓದಲು ಬಾಡಿಗೆ ಮನೆಯಲ್ಲಿದ್ದನು. ಪೊಲೀಸರು ಆತನ ಪತ್ತೆಗಾಗಿ ತಂಡಗಳನ್ನು ರಚಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಉಪ ಪೊಲೀಸ್ ಕಮಿಷನರ್ ಕೃಷ್ಣ ಲಾಲ್‌ಚಂದಾನಿ ತಿಳಿಸಿದ್ದಾರೆ.
ಇದನ್ನೂ ಓದಿ : ಮಹಾಶಿವರಾತ್ರಿಗೆ ‘ಶಿವ ಶಂಭೋ ಸ್ವಯಂಭೋ’ ರಿಲೀಸ್..!



















