ವಾಷಿಂಗ್ಟನ್/ನವದೆಹಲಿ : ಅಚ್ಚರಿಯ ಬೆಳವಣಿಗೆಯೊಂದರಲ್ಲಿ. ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ ಆರೋಪ ಎದುರಿಸುತ್ತಿದ್ದ ಭಾರತೀಯ ಪ್ರಜೆ ನಿಖಿಲ್ ಗುಪ್ತಾ (54) ಅಮೆರಿಕದ ಕೋರ್ಟ್‌ನಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. 2023ರಲ್ಲಿ ನಡೆದಿದ್ದ ಈ ಘಟನೆಯು ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಇದೀಗ ಗುಪ್ತಾ ಅವರ ಈ ‘ಯೂ-ಟರ್ನ್’ ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ.

ಮೋದಿ ಭೇಟಿಯ ನಡುವೆಯೇ ನಡೆದಿತ್ತು ಸಂಚು
ಅಮೆರಿಕದ ಪ್ರಾಸಿಕ್ಯೂಟರ್‌ಗಳು ನೀಡಿರುವ ಮಾಹಿತಿಯ ಪ್ರಕಾರ, 2023ರ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಿದ್ದ ಸಮಯದಲ್ಲೇ ಈ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಜೂನ್ 22ರಂದು ಶ್ವೇತಭವನದಲ್ಲಿ ಅಂದಿನ ಅಧ್ಯಕ್ಷ ಜೋ ಬೈಡನ್ ಅವರು ಪ್ರಧಾನಿ ಮೋದಿ ಅವರಿಗೆ ಔತಣಕೂಟ ಏರ್ಪಡಿಸಿದ್ದರು. ಉಭಯ ದೇಶಗಳ ನಾಯಕರು ಔತಣಕೂಟದಲ್ಲಿ ಭಾಗಿಯಾಗಿದ್ದಾಗ, ಈ ಹತ್ಯೆಯ ಸಂಚಿನ ಬಗ್ಗೆ ಅಧ್ಯಕ್ಷ ಬೈಡನ್ ಅವರಿಗೆ ಯಾವುದೇ ಸುಳಿವಿರಲಿಲ್ಲ. ಆದರೆ, ಮೋದಿ ಅವರ ಭೇಟಿ ಮುಗಿದ ಕೆಲವೇ ದಿನಗಳಲ್ಲಿ ಜೆಕ್ ಗಣರಾಜ್ಯದಲ್ಲಿ ನಿಖಿಲ್ ಗುಪ್ತಾನನ್ನು ಬಂಧಿಸಿದಾಗ ಈ ವಿಷಯ ಬೆಳಕಿಗೆ ಬಂದಿತ್ತು ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
ಪ್ರಧಾನಿ ಮೋದಿಗೆ ತಿಳಿದಿರಲಿಲ್ಲ ಎಂದ ಅಮೆರಿಕ
ಈ ಪ್ರಕರಣದ ಅತ್ಯಂತ ಪ್ರಮುಖ ಅಂಶವೆಂದರೆ, ಪನ್ನುನ್ ಹತ್ಯೆಯ ಸಂಚಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವಿತ್ತು ಅಥವಾ ಅವರಿಗೆ ಈ ವಿಷಯ ತಿಳಿದಿತ್ತು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಭಾರತ ಸರ್ಕಾರವೂ ಸಹ ಈ ಹತ್ಯೆ ಸಂಚಿನಲ್ಲಿ ತನ್ನ ಯಾವುದೇ ಪಾಲಿಲ್ಲ ಎಂದು ಮೊದಲಿನಿಂದಲೂ ವಾದಿಸುತ್ತಾ ಬಂದಿದೆ. ಪ್ರಸ್ತುತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಈ ಪ್ರಕರಣದ ಬಗ್ಗೆ ಯಾವುದೇ ಸಾರ್ವಜನಿಕ ಹೇಳಿಕೆ ನೀಡದೆ ಅಥವಾ ಭಾರತದತ್ತ ಬೆರಳು ಮಾಡದೆ ಮೌನಕ್ಕೆ ಶರಣಾಗಿದ್ದಾರೆ.
40 ವರ್ಷಗಳ ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ
2024ರಲ್ಲಿ ಜೆಕ್ ಗಣರಾಜ್ಯದಿಂದ ಅಮೆರಿಕಕ್ಕೆ ಹಸ್ತಾಂತರಗೊಂಡಿದ್ದ ನಿಖಿಲ್ ಗುಪ್ತಾ, ಆರಂಭದಲ್ಲಿ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸಿದ್ದ. ಆದರೆ, ಇದೀಗ ಏಕಾಏಕಿ ತಪ್ಪೊಪ್ಪಿಕೊಂಡಿರುವುದು ಕುತೂಹಲ ಮೂಡಿಸಿದೆ. ತಪ್ಪೊಪ್ಪಿಗೆಯ ಮೂಲಕ ಗುಪ್ತಾ ಸುದೀರ್ಘ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ. ಒಂದು ವೇಳೆ ವಿಚಾರಣೆ ನಡೆದು ಅಪರಾಧ ಸಾಬೀತಾಗಿದ್ದರೆ ಗರಿಷ್ಠ 40 ವರ್ಷಗಳ ಶಿಕ್ಷೆಯಾಗುವ ಸಾಧ್ಯತೆಯಿತ್ತು. ಪ್ರಸ್ತುತ ಅಮೆರಿಕ ಸರ್ಕಾರವು ಇವರಿಗೆ 21 ರಿಂದ 24 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವಂತೆ ನ್ಯಾಯಾಲಯವನ್ನು ಕೋರಿದೆ.
ಇದನ್ನೂ ಓದಿ : ಸಂಜು ಸ್ಯಾಮ್ಸನ್‌ಗೆ ಕಂಟಕವಾದ ‘ಆ’ ಒಂದು ತಪ್ಪು | ಪಾಕ್ ಪಂದ್ಯದಿಂದ ಕೈಬಿಡುವ ಸಾಧ್ಯತೆ?



















