ಸ್ಯಾನ್ ಫ್ರಾನ್ಸಿಸ್ಕೋ : ಉನ್ನತ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕ ಮೂಲದ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದಾನೆ. ಸದ್ಯ ಅವನ ಪತ್ತೆಗಾಗಿ ನಡೆಯುತ್ತಿರುವ ಕಾರ್ಯಾಚರಣೆ ಇಂದು (ಶನಿವಾರ) ಐದನೇ ದಿನಕ್ಕೆ ಕಾಲಿಟ್ಟಿದೆ. ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಬರ್ಕ್ಲಿಯಲ್ಲಿ ಕೆಮಿಕಲ್ ಮತ್ತು ಬಯೋಮಾಲಿಕ್ಯುಲರ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ 22 ವರ್ಷದ ಸಾಕೇತ್ ಶ್ರೀನಿವಾಸಯ್ಯ ಫೆ.9 ರಿಂದ ನಾಪತ್ತೆಯಾಗಿದ್ದಾರೆ.
ಸಾಕೇತ್ ಅವರು ಕೊನೆಯದಾಗಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಕಾಣಿಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆಯ ವೇಳೆ, ಟಿಲ್ಡನ್ ರೀಜನಲ್ ಪಾರ್ಕ್ ಸಮೀಪದ ಮನೆಯೊಂದರ ಬಳಿ ಸಾಕೇತ್ ಅವರ ಕಾಲೇಜು ಬ್ಯಾಗ್ ಪತ್ತೆಯಾಗಿದೆ. ಈ ಬ್ಯಾಗ್‌ನಲ್ಲಿ ಅವರ ಪಾಸ್‌ಪೋರ್ಟ್ ಮತ್ತು ಲ್ಯಾಪ್‌ಟಾಪ್ ಇರುವುದು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಪ್ರಸ್ತುತ ಬರ್ಕ್ಲಿ ಹಿಲ್ಸ್ ಮತ್ತು ಲೇಕ್ ಅಂಜಾ ಪ್ರದೇಶಗಳನ್ನು ಕೇಂದ್ರೀಕರಿಸಿ ನಗರದಾದ್ಯಂತ ತೀವ್ರ ಶೋಧ ನಡೆಸಲಾಗುತ್ತಿದೆ.
ಐಐಟಿ ಮದ್ರಾಸ್ ಹಳೆ ವಿದ್ಯಾರ್ಥಿ, ಸಂಶೋಧಕ ಸಾಕೇತ್
ಬೆಂಗಳೂರಿನ ಶ್ರೀ ವಾಣಿ ಎಜುಕೇಶನ್ ಸೆಂಟರ್‌ನಲ್ಲಿ ಶಾಲಾ ಶಿಕ್ಷಣ ಮುಗಿಸಿದ್ದ ಸಾಕೇತ್, ಐಐಟಿ ಮದ್ರಾಸ್‌ನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಇವರು ‘ಹೈಪರ್ ಲೂಪ್‌ಗಾಗಿ ಮೈಕ್ರೋಚಾನಲ್ ಕೂಲಿಂಗ್ ಸಿಸ್ಟಮ್’ ಸಂಶೋಧಿಸಿ ಅದಕ್ಕೆ ಪೇಟೆಂಟ್ ಕೂಡ ಪಡೆದಿದ್ದಾರೆ. ಹೊಸ ಆವಿಷ್ಕಾರಗಳ ಮೂಲಕ ಗುರುತಿಸಿಕೊಂಡಿದ್ದ ಸಾಕೇತ್ ಅವರ ನಾಪತ್ತೆ ಸುದ್ದಿ ಅನಿವಾಸಿ ಭಾರತೀಯ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಸ್ಥಳೀಯ ರೆಡ್ಡಿಟ್ (Reddit) ಗ್ರೂಪ್‌ಗಳ ಮೂಲಕ ನೂರಾರು ಸ್ವಯಂಸೇವಕರು ದೋಣಿ ಮತ್ತು ಶ್ವಾನ ದಳಗಳೊಂದಿಗೆ ಹುಡುಕಾಟದಲ್ಲಿ ಕೈಜೋಡಿಸಿದ್ದಾರೆ. ಆದರೆ, ಸಾಕೇತ್ ಮಾತ್ರ ಪತ್ತೆಯಾಗಿಲ್ಲ.
ಭಾರತೀಯ ರಾಯಭಾರ ಕಚೇರಿ ನೆರವು
ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಸಾಕೇತ್ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿರುವ ಕಚೇರಿಯು, ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಶೋಧ ಕಾರ್ಯವನ್ನು ಚುರುಕುಗೊಳಿಸಿದೆ. ಇತ್ತ ದೆಹಲಿಯಲ್ಲಿ ವಿದೇಶಾಂಗ ಇಲಾಖೆಯು ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದೆ. ಆರು ಅಡಿ ಒಂದು ಇಂಚು ಎತ್ತರವಿರುವ ಸಾಕೇತ್ ಕುರಿತು ಯಾವುದೇ ಮಾಹಿತಿ ಲಭ್ಯವಾದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ. ಸಾಕೇತ್ ಕನ್ನಡಿಗರು ಎಂಬುದು ಗೊತ್ತಾಗಿದ್ದು, ಅವರ ಕುಟುಂಬದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ : ಮಾರಮ್ಮನ ಜಾತ್ರೆಯಲ್ಲಿ ಭಕ್ತಿಯ ಪರಮಾವಧಿ | ಬಾಯಿಗೆ 12 ಸರಳುಗಳನ್ನ ಚುಚ್ಚಿ ಹರಕೆ ತೀರಿಸಿದ ಭಕ್ತರು



















