ಉಡುಪಿ | ಉಡುಪಿ ನಗರಸಭೆಯ ಆಸ್ತಿ ತೆರಿಗೆ ಪಾವತಿಯಲ್ಲಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಉಡುಪಿ ನಗರ ಪೊಲೀಸರು 24 ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಬಡಗುಬೆಟ್ಟಿನ ಸುಪೇಶ್(25) ಹಾಗೂ ಕುಂತಳನಗರದ ಶಾಂತಾ(43) ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನಲೆ |
ಉಡುಪಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಅವರು ಗುರುವಾರ ನೀಡಿದ ದೂರಿನ ಪ್ರಕಾರ, ನಗರಸಭೆ ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿಯನ್ನು ಇ-ಸ್ವೀಕೃತಿ ಮೂಲಕ ಚಲನ್ ಸೃಜಿಸಿ ಯೂನಿಯನ್ ಬ್ಯಾಂಕ್‌ನ ನಗರಸಭೆಯ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಇದೆ. ಫೆ.3ರಂದು ಆಸ್ತಿತೆರಿಗೆ ಪಾವತಿಗಳ ತುಲನೆ ಯಲ್ಲಿ, ಜನವರಿ 28ರಂದು ಪಾವತಿಯಾಗಿದೆ ಎಂದು ಯೂನಿಯನ್ ಬ್ಯಾಂಕ್ ಸೀಲ್ ಹೊಂದಿದ್ದ ಚಲನ್ ಪತ್ತೆಯಾದರೂ, ಅದೇ ದಿನಾಂಕದ ಬ್ಯಾಂಕ್ ವಿವರ ಪಟ್ಟಿಯಲ್ಲಿ ಪಾವತಿ ದಾಖಲಾಗಿರಲಿಲ್ಲ ಎಂಬುದು ಗಮನಕ್ಕೆ ಬಂದಿದೆ.
ಅದೇ ರೀತಿ ಫೆಬ್ರವರಿ 4ರಂದು ಪರಿಶೀಲನೆ ನಡೆಸಿದಾಗ, ಯೂನಿಯನ್ ಬ್ಯಾಂಕ್ ಸೀಲ್ ಹೊಂದಿದ್ದ ಕೆಲವು ಚಲನ್‌ಗಳು ಈಗಾಗಲೇ ಜನವರಿ 28ರಂದು ಜನರೇಟ್ ಆಗಿದ್ದ ಅದೇ ಚಲನ್ ಸಂಖ್ಯೆಯನ್ನು ಹೊಂದಿರುವುದು ಪತ್ತೆಯಾಗಿದೆ. ಒಂದೇ ಚಲನ್ ಸಂಖ್ಯೆಗೆ ಎರಡು ಬೇರೆ ಬೇರೆ ದಿನಾಂಕಗಳಲ್ಲಿ ಸೀಲ್ ಹೊಂದಿದ ಚಲನ್‌ಗಳು ದೊರೆತಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಯಾರೋ ಆರೋಪಿಗಳು ಯೂನಿಯನ್ ಬ್ಯಾಂಕ್ ಸೀಲ್ ದುರ್ಬಳಕೆ ಮಾಡಿ ಆಸ್ತಿತೆರಿಗೆ ಪಾವತಿಸಿದ ಹಣವನ್ನು ವಂಚನೆ ಮಾಡಿರುವ ಶಂಕೆಯ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ತನಿಖೆ ವೇಳೆ ಬಡಗುಬೆಟ್ಟು ಕಸ್ತೂರ್‌ಬಾ ನಗರದ ಸುಪೇಶ್ (25) ಹಾಗೂ ಮೂಡು ಅಲೆವೂರು ಕುಂತಲ ನಗರದ ಶಾಂತಾ (43) ಎಂಬಿಬ್ಬರು ಆರೋಪಿಗಳನ್ನು ಕೃಷ್ಣ ಮಠದ ರಾಜಾಂಗಣ ಸಮೀಪ ಬಂಧಿಸಲಾಗಿದೆ.
ಇದನ್ನೂ ಓದಿ : ಮೈಸೂರಿನಲ್ಲಿ ಪೆಟ್ರೋಲ್ ಬಂಕ್‌ಗೆ ನುಗ್ಗಿ ದರೋಡೆ.. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ!



















