ಬೆಂಗಳೂರು : ಕಳೆದ ಕೆಲ ತಿಂಗಳುಗಳಿಂದ ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಇತ್ತೀಚೆಗೆ ಇಳಿಕೆಯಾಗುತ್ತಿದೆ. ಇದರಿಂದಾಗಿ ಗ್ರಾಹಕರು ಚಿನ್ನ ಖರೀದಿಸಲು ಧೈರ್ಯ ಮಾಡುತ್ತಿದ್ದಾರೆ. ಅದರಂತೆ, ಶುಕ್ರವಾರವೂ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು, ಖರೀದಿದಾರರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಶುಕ್ರವಾರ ಒಂದೇ ದಿನ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ 240 ರೂಪಾಯಿ ಇಳಿಕೆಯಾಗಿರುವುದು ಜನ ನಿಟ್ಟುಸಿರು ಬಿಡುವಂತಾಗಿದೆ.
ಬೆಂಗಳೂರಿನಲ್ಲಿ ಶುಕ್ರವಾರ 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆಯು 14,280 ರೂಪಾಯಿ ಆಗಿದೆ. ಅಂದರೆ, 10 ಗ್ರಾಂ ಚಿನ್ನದ ಬೆಲೆಯಲ್ಲಿ ಒಂದೇ ದಿನದಲ್ಲಿ 2,400 ರೂಪಾಯಿ ಇಳಿಕೆಯಾದಂತಾಗಿದೆ. ಗುರುವಾರ 10 ಗ್ರಾಂ ಚಿನ್ನದ ಬೆಲೆಯು 1,45,200 ರೂಪಾಯಿ ಇತ್ತು. ಇದೇ ರೀತಿ, 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯಲ್ಲೂ ಶುಕ್ರವಾರ 2,620 ರೂಪಾಯಿ ಇಳಿಕೆಯಾಗಿದ್ದು, ಅಪರಂಜಿ ಚಿನ್ನ ಖರೀದಿಸುವವರಿಗೆ ಒಳ್ಳೆಯ ದಿನವಾಗಿದೆ.
ಬೆಳ್ಳಿ ಬೆಲೆಯಲ್ಲೂ ಇಳಿಕೆ
ಬೆಳ್ಳಿಯ ಬೆಲೆಯೂ ಇತ್ತೀಚೆಗೆ ಗಗನಕ್ಕೇರಿತ್ತು. ಆದರೆ, ಕೆಲ ದಿನಗಳಿಂದ ಬೆಳ್ಳಿಯ ಬೆಲೆಯೂ ಇಳಿಕೆಯಾಗುತ್ತಿದೆ. ಶುಕ್ರವಾರ ಒಂದೇ ದಿನ ಬೆಳ್ಳಿಯ ಬೆಲೆಯಲ್ಲಿ ಒಂದು ಕೆ.ಜಿಗೆ 15 ಸಾವಿರ ರೂಪಾಯಿ ಇಳಿಕೆಯಾಗಿದೆ. ಗುರುವಾರ ಒಂದು ಕೆ.ಜಿ ಬೆಳ್ಳಿಯ ಬೆಲೆಯಲ್ಲಿ 5 ಸಾವಿರ ರೂಪಾಯಿ ಜಾಸ್ತಿಯಾಗಿತ್ತು. ಈಗ ಒಂದೇ ದಿನ 15 ಸಾವಿರ ರೂಪಾಯಿ ಇಳಿಕೆಯಾಗಿದೆ.
ಕರ್ನಾಟಕ ಸೇರಿ ದೇಶದಲ್ಲಿ ಈಗಾಗಲೇ ಮದುವೆ ಸೀಸನ್ ಆರಂಭವಾಗಿದೆ. ಹಾಗಾಗಿ, ಚಿನ್ನದ ಬೆಲೆಯಲ್ಲಿ ಇನ್ನಷ್ಟು ಏರಿಕೆಯಾಗುತ್ತದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದರ ಬೆನ್ನಲ್ಲೇ, ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿರುವುದು ಗ್ರಾಹಕರಿಗೆ ಅನುಕೂಲವಾಗುತ್ತಿದೆ. ಮದುವೆ ಸೇರಿ ಯಾವುದೇ ಸಮಾರಂಭಗಳಿಗಾಗಿ ಈಗಲೇ ಚಿನ್ನ ಖರೀದಿಸುವುದು ಒಳ್ಳೆಯದು ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ | ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಕೊ*ಲೆ!



















