ನೋಮ್ ಪೆನ್ (ಕಾಂಬೋಡಿಯಾ) : ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ‘ಡಿಜಿಟಲ್ ಅರೆಸ್ಟ್’ ಹಗರಣಗಳ ಹಿಂದೆ ಎಷ್ಟು ದೊಡ್ಡ ಜಾಲ ಅಡಗಿದೆ ಎಂಬುದಕ್ಕೆ ಕಾಂಬೋಡಿಯಾದಲ್ಲಿ ನಡೆದ ದಾಳಿಯೊಂದು ಸ್ಪಷ್ಟ ಸಾಕ್ಷಿ ಹೇಳಿದೆ. ಕಾಂಬೋಡಿಯಾದ ಕ್ಯಾಂಪೋಟ್ ಪ್ರಾಂತ್ಯದಲ್ಲಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯ ವೇಳೆ, ಭಾರತೀಯರನ್ನು ವಂಚಿಸಲು ಸೃಷ್ಟಿಸಲಾಗಿದ್ದ ನಕಲಿ ಭಾರತೀಯ ಪೊಲೀಸ್ ಠಾಣೆಯ ಸೆಟ್ ಪತ್ತೆಯಾಗಿದೆ. ಈ ಜಾಲವು ಭಾರತೀಯರನ್ನು ಭಯಪಡಿಸಿ ಅವರಿಂದ ಹಣ ಸುಲಿಗೆ ಮಾಡಲು ಮಹಾತ್ಮ ಗಾಂಧೀಜಿಯವರ ಫೋಟೋ ಸೇರಿದಂತೆ ಅಸಲಿ ಪೊಲೀಸ್ ಠಾಣೆಯಂತೆಯೇ ಕಾಣುವ ಕಚೇರಿಯನ್ನು ನಿರ್ಮಿಸಿತ್ತು ಎಂಬುದು ಆಘಾತಕಾರಿ ಸಂಗತಿಯಾಗಿದೆ.
ಕಳೆದ ಕೆಲವು ವಾರಗಳಿಂದ ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವ ಕಾಂಬೋಡಿಯಾ ಸರ್ಕಾರ, ದೇಶಾದ್ಯಂತ ಇರುವ ಸುಮಾರು 190 ಸ್ಕ್ಯಾಮ್ ಸೆಂಟರ್‌ಗಳನ್ನು ಮುಚ್ಚಿಸಿರುವುದಾಗಿ ಘೋಷಿಸಿದೆ. ಕಾಂಬೋಡಿಯಾದ ಆನ್‌ಲೈನ್ ಸ್ಕ್ಯಾಮ್ ತಡೆ ಆಯೋಗದ ಅಧ್ಯಕ್ಷ ಛಾಯ್ ಸಿನಾರಿತ್ ಅವರ ಪ್ರಕಾರ, ಈವರೆಗೆ ಸುಮಾರು 173 ಪ್ರಮುಖ ಅಪರಾಧಿಗಳನ್ನು ಬಂಧಿಸಲಾಗಿದ್ದು, ವಿವಿಧ ದೇಶಗಳಿಂದ ಕರೆತರಲಾಗಿದ್ದ 11,000 ಕಾರ್ಮಿಕರನ್ನು ಗಡೀಪಾರು ಮಾಡಲಾಗಿದೆ. ಚೀನಾ ಮತ್ತು ಅಮೆರಿಕದಂತಹ ದೇಶಗಳು ಈ ಹಗರಣಗಳ ಕಿಂಗ್‌ಪಿನ್‌ಗಳ ಮೇಲೆ ಕಾನೂನು ಕ್ರಮ ಜರುಗಿಸಿದ ಬೆನ್ನಲ್ಲೇ ಕಾಂಬೋಡಿಯಾ ಈ ನಿರ್ಧಾರ ಕೈಗೊಂಡಿದೆ.
ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಹಣ ಸುಲಿಗೆ
ವಿಯೆಟ್ನಾಂ ಗಡಿಗೆ ಸಮೀಪವಿರುವ ‘ಮೈ ಕ್ಯಾಸಿನೊ’ ಎಂಬ ಬೃಹತ್ ಸಂಕೀರ್ಣದಲ್ಲಿ ಈ ವಂಚನೆಯ ಜಾಲ ಕಾರ್ಯಾಚರಿಸುತ್ತಿತ್ತು. ಇಲ್ಲಿ ಪತ್ತೆಯಾದ ದಾಖಲೆಗಳು ಥಾಯ್ಲೆಂಡ್ ಮತ್ತು ಭಾರತದ ಜನರನ್ನು ಗುರಿಯಾಗಿಸಿಕೊಂಡು ಸ್ಕ್ಯಾಮ್ ಮಾಡಲು ನೀಡಲಾಗಿದ್ದ ತರಬೇತಿಯ ವಿವರಗಳನ್ನು ಹೊಂದಿವೆ. ವಿಶೇಷವಾಗಿ ಭಾರತೀಯರಿಗೆ ವಿಡಿಯೋ ಕಾಲ್ ಮಾಡಿ, ನಾವು ಪೊಲೀಸ್ ಅಧಿಕಾರಿಗಳು ಎಂದು ನಂಬಿಸಲು ಸಿದ್ಧಪಡಿಸಲಾಗಿದ್ದ ಸ್ಟುಡಿಯೋ ಮತ್ತು ಪೊಲೀಸ್ ಠಾಣೆಯಂತಹ ವ್ಯವಸ್ಥೆಯನ್ನು ಕಂಡು ಸ್ವತಃ ಅಧಿಕಾರಿಗಳೇ ದಂಗಾಗಿದ್ದಾರೆ. ಇಲ್ಲಿಂದಲೇ ಸಾವಿರಾರು ಜನರಿಗೆ ‘ಡಿಜಿಟಲ್ ಅರೆಸ್ಟ್’ ಬೆದರಿಕೆ ಹಾಕಿ ಲಕ್ಷಾಂತರ ರೂಪಾಯಿ ಲೂಟಿ ಮಾಡಲಾಗುತ್ತಿತ್ತು.
ಪೊಲೀಸರ ಕಣ್ಣೆದುರೇ ಪರಾರಿಯಾದ 7,000 ವಂಚಕರು
ಈ ಕಾರ್ಯಾಚರಣೆಯ ವೇಳೆ ದೊಡ್ಡ ಮಟ್ಟದ ವೈಫಲ್ಯವೊಂದು ಕಂಡುಬಂದಿದೆ. ಈ ಹಗರಣದ ಕಿಂಗ್‌ಪಿನ್ ಎನ್ನಲಾದ ಉದ್ಯಮಿ ಲೈ ಕುವಾಂಗ್ ಎಂಬಾತನನ್ನು ಬಂಧಿಸಿದ ಕೂಡಲೇ, ಈ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 6,000 ರಿಂದ 7,000 ಕಾರ್ಮಿಕರು ಸಾಮೂಹಿಕವಾಗಿ ಪರಾರಿಯಾಗಿದ್ದಾರೆ. ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಮಾವೋ ಚಾನ್‌ಮೊತುರಿತ್ ಅವರು ಮಾತನಾಡಿ, “ನಮ್ಮ ಇಡೀ ಪ್ರಾಂತ್ಯದಲ್ಲಿ ಕೇವಲ 1,000 ಪೊಲೀಸರಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಏಕಾಏಕಿ ಹೊರಬಂದ ಜನರನ್ನು ತಡೆಯಲು ನಮಗೆ ಸಾಧ್ಯವಾಗಲಿಲ್ಲ” ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಈ ಸ್ಕ್ಯಾಮ್ ಸೆಂಟರ್‌ಗಳಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಅನೇಕರು ಮಾನವ ಕಳ್ಳಸಾಗಣೆಗೆ ಬಲಿಯಾದವರಾಗಿದ್ದಾರೆ. ಇವರನ್ನು ಅಮಾನವೀಯ ಸ್ಥಿತಿಯಲ್ಲಿ ಕೂಡಿಹಾಕಿ ವಂಚನೆ ಮಾಡಲು ಒತ್ತಾಯಿಸಲಾಗುತ್ತಿತ್ತು ಎಂದು ಆಮ್ನೆಸ್ಟಿ ಇಂಟರ್ನ್ಯಾಷನಲ್ ವರದಿ ಮಾಡಿದೆ. ಕಾಂಬೋಡಿಯಾ ಸರ್ಕಾರ ಇಷ್ಟು ದಿನ ಇಂತಹ ಕೇಂದ್ರಗಳ ಅಸ್ತಿತ್ವವನ್ನು ನಿರಾಕರಿಸುತ್ತಾ ಬಂದಿತ್ತು. ಆದರೆ ಈಗ ಸಾಕ್ಷ್ಯಧಾರಗಳ ಸಹಿತ ಈ ಜಾಲ ಬಯಲಾಗಿದೆ.
ಇದನ್ನೂ ಓದಿ : ಪಾಕ್ ಕದನಕ್ಕೆ ಟೀಂ ಇಂಡಿಯಾ ಈಗಾಗ್ಲೇ ‘ಫುಲ್ ರೆಡಿ’ | ಅಭಿಷೇಕ್ ಶರ್ಮಾ, ಬುಮ್ರಾ ಆಡುವುದು ಇನ್ನೂ ಡೌಟ್!



















