ಒಟ್ಟಾವಾ : ಕೆನಡಾದ ಬ್ರಿಟಿಷ್ ಕೊಲಂಬಿಯಾದ ಟಂಬ್ಲರ್ ರಿಡ್ಜ್ ಎಂಬ ಪುಟ್ಟ ಪಟ್ಟಣದಲ್ಲಿ ಬುಧವಾರ ನಡೆದ ಭೀಕರ ಗುಂಡಿನ ದಾಳಿಯು ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಘಟನೆ ಕುರಿತು ಮತ್ತಷ್ಟು ಆಘಾತಕಾರಿ ಅಂಶಗಳು ಬಯಲಾಗತೊಡಗಿವೆ. 18 ವರ್ಷದ ಜೆಸ್ಸಿ ವಾನ್ ರೂಟ್ಸೆಲಾರ್ ಎಂಬ ತೃತೀಯ ಲಿಂಗಿ ತನ್ನ ಸ್ವಂತ ತಾಯಿ ಮತ್ತು 11 ವರ್ಷದ ತಮ್ಮನನ್ನು ಮನೆಯಲ್ಲೇ ಹತ್ಯೆ ಮಾಡಿದ ನಂತರ, ತಾನು ಓದುತ್ತಿದ್ದ ಹಳೆಯ ಶಾಲೆಯ ಮೇಲೆ ದಾಳಿ ನಡೆಸಿ ಒಟ್ಟು 9 ಮಂದಿಯ ಸಾವಿಗೆ ಕಾರಣವಾಗಿದ್ದಾಳೆ. 2020ರ ನಂತರ ಕೆನಡಾದಲ್ಲಿ ನಡೆದ ಅತ್ಯಂತ ಭೀಕರ ಹತ್ಯಾಕಾಂಡ ಇದಾಗಿದೆ ಎಂದು ವರದಿಯಾಗಿದೆ.

ಮನೆಯಲ್ಲೇ ಶುರುವಾದ ಮಾರಣಹೋಮ
ಆರೋಪಿ ಜೆಸ್ಸಿ ಮೊದಲು ತನ್ನ ಮನೆಯಲ್ಲಿ 39 ವರ್ಷದ ತಾಯಿ ಮತ್ತು 11 ವರ್ಷದ ತಮ್ಮನನ್ನು ಗುಂಡಿಕ್ಕಿ ಕೊಂದಿದ್ದಾಳೆ. ಈ ವಿಚಾರವನ್ನು ಕುಟುಂಬದ ಮತ್ತೊಬ್ಬ ಸದಸ್ಯರು ನೆರೆಹೊರೆಯವರಿಗೆ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಹತ್ಯೆ ನಡೆಸಿದ ನಂತರ ಜೆಸ್ಸಿ ನೇರವಾಗಿ ಸಮೀಪದ ಪ್ರೌಢಶಾಲೆಗೆ ನುಗ್ಗಿದ್ದಾಳೆ. 4 ವರ್ಷಗಳ ಹಿಂದೆ ಈ ಶಾಲೆಯಿಂದ ಆಕೆ ಹೊರಬಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲೆಗೆ ನುಗ್ಗಿದ ಜೆಸ್ಸಿ ಅಲ್ಲಿನ ಗ್ರಂಥಾಲಯ ಮತ್ತು ಮೆಟ್ಟಿಲುಗಳ ಬಳಿ ಇದ್ದವರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾಳೆ.
ಈ ದಾಳಿಯಲ್ಲಿ ಓರ್ವ ಶಿಕ್ಷಕಿ ಮತ್ತು ಐವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟ ವಿದ್ಯಾರ್ಥಿಗಳಲ್ಲಿ ಮೂವರು 12 ವರ್ಷದ ಬಾಲಕಿಯರು ಮತ್ತು ಇಬ್ಬರು ಬಾಲಕರು ಸೇರಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದಾಗ ಅವರ ಮೇಲೂ ದಾಳಿ ನಡೆದಿದೆ. ಕೊನೆಯಲ್ಲಿ ಆರೋಪಿ ಜೆಸ್ಸಿ ತನಗೆ ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯಲ್ಲಿ 24ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿ ಜೆಸ್ಸಿ ವಾನ್ ರೂಟ್ಸೆಲಾರ್ ಈ ಹಿಂದೆ ಮಾನಸಿಕ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಳು ಎಂದು ಪೊಲೀಸ್ ಕಮಾಂಡರ್ ಡ್ವೇನ್ ಮೆಕ್ಡೊನಾಲ್ಡ್ ತಿಳಿಸಿದ್ದಾರೆ. ಈ ಹಿಂದೆಯೂ ಪೊಲೀಸರು ಆಕೆಯ ಮನೆಗೆ ಹಲವು ಬಾರಿ ಭೇಟಿ ನೀಡಿದ್ದರು ಮತ್ತು ಪ್ರಾದೇಶಿಕ ಮಾನಸಿಕ ಆರೋಗ್ಯ ಕಾಯ್ದೆಯಡಿ ಆಕೆಯನ್ನು ತಪಾಸಣೆಗೂ ಒಳಪಡಿಸಲಾಗಿತ್ತು. ವಿಶೇಷವೆಂದರೆ, ಆಕೆಯ ಬಳಿ ಇದ್ದ ಶಸ್ತ್ರಾಸ್ತ್ರ ಪರವಾನಗಿ ಅವಧಿ ಮುಗಿದಿದ್ದರೂ ಮತ್ತು ಹಿಂದೆ ಒಮ್ಮೆ ಆಕೆಯಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದರೂ, ನಂತರ ಅವುಗಳನ್ನು ಮತ್ತೆ ಆಕೆಗೇ ಹಿಂತಿರುಗಿಸಲಾಗಿತ್ತು ಎಂಬ ವಿಷಯ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆಯಿಂದ ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ತೀವ್ರ ಭಾವುಕರಾಗಿದ್ದು, ಮೃತರಿಗೆ ಗೌರವ ಸಲ್ಲಿಸಲು ಏಳು ದಿನಗಳ ಕಾಲ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸುವಂತೆ ಆದೇಶಿಸಿದ್ದಾರೆ. “ಇಡೀ ರಾಷ್ಟ್ರವು ನಿಮ್ಮೊಂದಿಗೆ ದುಃಖಿಸುತ್ತಿದೆ” ಎಂದು ಅವರು ಟಂಬ್ಲರ್ ರಿಡ್ಜ್ ನಿವಾಸಿಗಳಿಗೆ ಸಾಂತ್ವನ ಹೇಳಿದ್ದಾರೆ. ಈ ಘಟನೆಯ ಬೆನ್ನಲ್ಲೇ ಕೆನಡಾದಲ್ಲಿ ಶಸ್ತ್ರಾಸ್ತ್ರ ನಿಯಂತ್ರಣ ಕಾಯ್ದೆಯನ್ನು ಮತ್ತಷ್ಟು ಕಠಿಣಗೊಳಿಸುವ ಬಗ್ಗೆ ಒತ್ತಾಯ ಕೇಳಿಬರುತ್ತಿದೆ
ಇದನ್ನೂ ಓದಿ : ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ವರುಣನ ಕಂಟಕ | ಕೋಟಿ ಕೋಟಿ ನಷ್ಟದ ಭೀತಿಯಿಂದ ಪಾರಾದ ಐಸಿಸಿ!



















