ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ಆಡಳಿತಾತ್ಮಕ, ಕಾನೂನು ಹಾಗೂ ನೀತಿ ಸಂಬಂಧಿತ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದ್ದು, ಮಹತ್ವದ ನಿರ್ಧಾರಗಳು ಹೊರಬರುವ ಸಾಧ್ಯತೆ ಇದೆ.
ನಿಯಮ ಉಲ್ಲಂಘಿಸಿರುವ ಕಲ್ಲು ಕ್ರಷರ್‌ಗಳಿಗೆ ದಂಡ ಪಾವತಿಸಲು ಒನ್ ಟೈಮ್ ಸೆಟಲ್‌ಮೆಂಟ್ ಜಾರಿಗೆ ತರುವ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ರೇಷ್ಮೆ ಮಾರಾಟ ಮಂಡಳಿಯನ್ನು ರೇಷ್ಮೆ ಉದ್ಯಮಗಳ ನಿಗಮದೊಂದಿಗೆ ವಿಲೀನಗೊಳಿಸುವ ಪ್ರಸ್ತಾವನೆಯೂ ಸಚಿವ ಸಂಪುಟದ ಮುಂದೆ ಬರಲಿದೆ.
ಇದೇ ವೇಳೆ, ಸರ್ಕಾರಿ ಸಭೆ ಹಾಗೂ ಸಮಾರಂಭಗಳಲ್ಲಿ ಶಿಷ್ಟಾಚಾರ ಪಾಲನೆಯ ಕುರಿತು ಪರಿಷ್ಕೃತ ಅಧಿಸೂಚನೆಗೆ ಘಟನೋತ್ತರ ಅನುಮೋದನೆ ನೀಡುವ ವಿಚಾರ ಚರ್ಚೆಯಾಗಲಿದೆ. ರಾಜ್ಯದ ಉಚ್ಚ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳ ಉದ್ಘಾಟನಾ ಸಮಾರಂಭಗಳಲ್ಲಿ ಶಿಷ್ಟಾಚಾರ ಸಂಬಂಧ ಹೊಸ ಮಾರ್ಗಸೂಚಿಗಳಿಗೆ ಅನುಮೋದನೆ ನೀಡುವ ವಿಷಯವೂ ಅಜೆಂಡಾದಲ್ಲಿದೆ.
ಎಸ್‌ಐಆರ್ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಸಾಧಕ–ಬಾಧಕಗಳ ಕುರಿತು ಸಚಿವರು ಚರ್ಚೆ ನಡೆಸಲಿದ್ದಾರೆ. ಜೊತೆಗೆ ರಾಜ್ಯ ಬಜೆಟ್ ಅಧಿವೇಶನ ಕರೆಯುವ ಕುರಿತು ಅನುಮೋದನೆ ನೀಡುವ ಸಾಧ್ಯತೆ ಇದೆ.
ವಿವಾದಿತ ದೇವನಹಳ್ಳಿ–ಚನ್ನರಾಯಪಟ್ಟಣ ವಿಶೇಷ ಕೃಷಿ ವಲಯವನ್ನು ಬದಲಾಯಿಸುವ ಕುರಿತು ಚರ್ಚೆ ನಡೆಯಲಿದೆ. ಐತಿಹಾಸಿಕ ಕುಣಿಗಲ್ ಸ್ಟಡ್ ಫಾರಂ ಅನ್ನು ಬೆಂಗಳೂರು ಟರ್ಫ್ ಕ್ಲಬ್‌ಗೆ ಗುತ್ತಿಗೆ ನೀಡುವ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.
ಇದಲ್ಲದೆ, ಜಿಬಿಎ ವ್ಯಾಪ್ತಿಯ ನಾಲ್ಕು ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ AB-ARK ಯೋಜನೆಯಡಿ 2A ಚಿಕಿತ್ಸಾ ವಿಧಾನಕ್ಕೆ ರಫರಲ್ ವಿನಾಯಿತಿ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆಯೂ ಇದೆ.
ಒಟ್ಟಾರೆ, ಇಂದಿನ ಸಚಿವ ಸಂಪುಟ ಸಭೆ ಹಲವು ಮಹತ್ವದ ಆಡಳಿತಾತ್ಮಕ ಹಾಗೂ ನೀತಿನಿರ್ಣಯಗಳಿಗೆ ವೇದಿಕೆಯಾಗುವ ಸಾಧ್ಯತೆ ಇರುವುದರಿಂದ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.
ಇದನ್ನೂ ಓದಿ : ಇಂದು ಭಾರತ್ ಬಂದ್ | ಸಾರಿಗೆ, ಬ್ಯಾಂಕ್ ಸೇವೆಗಳು ವ್ಯತ್ಯಯ ಸಾಧ್ಯತೆ



















