ಮುಂಬೈ : ಚೆಕ್ ಬೌನ್ಸ್ ಪ್ರಕರಣದ ಸುಳಿಗೆ ಸಿಲುಕಿ ಈಗ ದೆಹಲಿಯ ತಿಹಾರ್ ಜೈಲು ಸೇರಿರುವ ಬಾಲಿವುಡ್‌ನ ಖ್ಯಾತ ಹಾಸ್ಯ ನಟ ರಾಜಪಾಲ್ ಯಾದವ್ ಅವರಿಗೆ ಇದೀಗ ಚಿತ್ರರಂಗದಿಂದ ಬೆಂಬಲ ಹರಿದುಬರುತ್ತಿದೆ. ಈ ಕಷ್ಟದ ಸಮಯದಲ್ಲಿ ನಟನ ನೆರವಿಗೆ ಧಾವಿಸಿರುವ ‘ಜೆಮ್ ಟ್ಯೂನ್ಸ್’ ಮ್ಯೂಸಿಕ್ ಕಂಪನಿಯ ಮಾಲೀಕ ಹಾಗೂ ಸಂಗೀತ ನಿರ್ಮಾಪಕ ರಾವ್ ಇಂದರ್ಜೀತ್ ಸಿಂಗ್ ಯಾದವ್, ಬರೋಬ್ಬರಿ 1.11 ಕೋಟಿ ರೂಪಾಯಿಗಳ ಆರ್ಥಿಕ ಸಹಾಯವನ್ನು ಘೋಷಿಸಿದ್ದಾರೆ. ರಾಜಪಾಲ್ ಯಾದವ್ ಅವರನ್ನು ಚಿತ್ರರಂಗದ ಅವಿಭಾಜ್ಯ ಅಂಗ ಎಂದು ಬಣ್ಣಿಸಿರುವ ಇಂದರ್ಜೀತ್, ಈ ನೆರವು ಕೇವಲ ಹಣವಲ್ಲ, ಬದಲಿಗೆ ಒಬ್ಬ ಕಲಾವಿದನಿಗೆ ತೋರುತ್ತಿರುವ ಗೌರವ ಎಂದು ಹೇಳಿದ್ದಾರೆ.
ಸಂಗೀತ ನಿರ್ಮಾಪಕ ರಾವ್ ಇಂದರ್ಜೀತ್ ಸಿಂಗ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ರಾಜಪಾಲ್ ಯಾದವ್ ವರ್ಷಗಳಿಂದ ಕೋಟ್ಯಂತರ ಪ್ರೇಕ್ಷಕರ ಮುಖದಲ್ಲಿ ನಗು ಮೂಡಿಸಿದ್ದಾರೆ. ಈಗ ನಾವು ಅವರಿಗೆ ಮಾಡುತ್ತಿರುವುದು ಕೇವಲ ಆರ್ಥಿಕ ಸಹಾಯವಲ್ಲ, ಸಂಕಷ್ಟದಲ್ಲಿರುವ ಕುಟುಂಬದ ಸದಸ್ಯನ ಪರವಾಗಿ ನಿಲ್ಲುವ ಪ್ರಯತ್ನ ಎಂದು ಅವರು ತಿಳಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಕ್ಯೂಆರ್ ಕೋಡ್ ಮತ್ತು ಬ್ಯಾಂಕ್ ವಿವರಗಳನ್ನು ಹಂಚಿಕೊಂಡಿರುವ ಅವರು, ಅಭಿಮಾನಿಗಳು ಮತ್ತು ಚಿತ್ರರಂಗದ ಇತರ ಗಣ್ಯರು ಸಹ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ. ಇದು ಚಿತ್ರರಂಗದ ಒಗ್ಗಟ್ಟನ್ನು ಪ್ರದರ್ಶಿಸುವ ಸಮಯ ಎಂದು ಅವರು ಕರೆ ನೀಡಿದ್ದಾರೆ.
ರಾಜಪಾಲ್ ಪರ ನಿಂತ ತಾರಾ ಬಳಗ
ರಾಜಪಾಲ್ ಯಾದವ್ ಅವರು ಕಾನೂನು ಪ್ರಕ್ರಿಯೆಯ ಭಾಗವಾಗಿ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಇಂದರ್ಜೀತ್ ಸಿಂಗ್ ಅವರಿಗಿಂತ ಮುಂಚಿತವಾಗಿ, ಸಮಾಜಸೇವೆಯಲ್ಲಿ ಸದಾ ಮುಂದಿರುವ ನಟ ಸೋನು ಸೂದ್, ನಟ ಗುರುಮೀತ್ ಚೌಧರಿ ಮತ್ತು ಜನಶಕ್ತಿ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ತೇಜ್ ಪ್ರತಾಪ್ ಯಾದವ್ ಅವರು ಕೂಡ ರಾಜಪಾಲ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಹತ್ತು ವರ್ಷಗಳ ಹಿಂದಿನ ಈ ಪ್ರಕರಣದಲ್ಲಿ ನಟನಿಗೆ ಕಾನೂನು ಸಂಕಷ್ಟ ಎದುರಾಗಿದ್ದು, ಸಿನಿಮಾ ಗೆಳೆಯರು ಒಬ್ಬೊಬ್ಬರಾಗಿ ನೆರವಿನ ಹಸ್ತ ಚಾಚುತ್ತಿರುವುದು ಸಮಾಧಾನದ ವಿಚಾರವಾಗಿದೆ.
ಚಿತ್ರರಂಗ ಎಂಬ ದೊಡ್ಡ ಕುಟುಂಬ
“ಚಲನಚಿತ್ರ ರಂಗವು ಒಂದು ದೊಡ್ಡ ಕುಟುಂಬವಿದ್ದಂತೆ. ಇಲ್ಲಿ ಒಬ್ಬರಿಗೆ ಕಷ್ಟ ಬಂದಾಗ ಉಳಿದವರು ಬೆಂಬಲಕ್ಕೆ ನಿಲ್ಲುವುದು ನಮ್ಮ ಧರ್ಮ. ರಾಜಪಾಲ್ ಯಾದವ್ ಅವರು ಮರಳಿ ಬಂದು ಮತ್ತೆ ಎಲ್ಲರನ್ನು ನಗಿಸುವಂತಾಗಲಿ ಎಂಬುದು ನಮ್ಮ ಆಶಯ” ಎಂದು ನಿರ್ಮಾಪಕ ಇಂದರ್ಜೀತ್ ಸಿಂಗ್ ಹೇಳಿದ್ದಾರೆ. ಸದ್ಯ ಜೈಲಿನಲ್ಲಿರುವ ನಟನಿಗೆ ಈ ಆರ್ಥಿಕ ನೆರವು ದೊಡ್ಡ ಮಟ್ಟದ ನಿರಾಳತೆ ನೀಡುವ ಸಾಧ್ಯತೆಯಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂದರ್ಜೀತ್ ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಹಲವರು ನಟನ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ನಿನ್ನೆಯಷ್ಟೇ ತಿಹಾರ್ ಜೈಲು ಸೇರಿದ ನಟ ರಾಜ್ ಪಾಲ್ ಯಾದವ್, ನನ್ನಲ್ಲಿ ಹಣವಿಲ್ಲ, ಹಾಗಾಗಿ ಜೈಲಿನಲ್ಲಿ ಶರಣಾಗತಿಯಾಗದೇ ಬೇರೆ ದಾರಿಯಿಲ್ಲ. ನನ್ನ ಸಹಾಯಕ್ಕೆ ಯಾರೂ ಇಲ್ಲ ಎಂದು ಕಣ್ಣೀರಿಟ್ಟಿದ್ದರು.
ಇದನ್ನೂ ಓದಿ : ಭಾರತ-ಅಮೆರಿಕ ವ್ಯಾಪಾರ ಒಪ್ಪಂದ | ಬೇಳೆಕಾಳುಗಳ ಮೇಲಿನ ಸುಂಕ ಕಡಿತದ ಹೇಳಿಕೆಯಿಂದ ಹಿಂದೆ ಸರಿದ ಅಮೆರಿಕ!



















