ಮಂಗಳೂರು : ಮದುವೆಯಾಗುವುದಾಗಿ ನಂಬಿಸಿ ಹಲವು ಯುವತಿಯರಿಗೆ ಮೋಸ ಮಾಡಿದ ಪ್ರಕರಣದಲ್ಲಿ ಮಂಗಳೂರು ಪೊಲೀಸರು ವಂಚಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ವಂಚಿಸುತ್ತಿದ್ದ ಸುಶಾಂತ್ ಪೂಜಾರಿ ಮತ್ತು ಮದುವೆಯೊಂದಕ್ಕೆ ಸಹಾಯ ಮಾಡಿದ ಭಾಸ್ಕರ್ ಬಂಧಿತರು.
ಮಹಿಳೆಯೊಬ್ಬರಿಗೆ ಸುಶಾಂತ್ ಪೂಜಾರಿ ಎಂಬ ವ್ಯಕ್ತಿಯು ಆನ್ಲೈನ್ ಮದುವೆ ಪ್ಲಾಟ್ ಫಾರಂ ಮೂಲಕ ಪರಿಚಯವಾಗಿ ಮಹಾರಾಷ್ಟ್ರದ ಘನಸೋಳಿಯ ನವ ಮುಂಬೈನಲ್ಲಿ 2025 ಫೆ. 2ರಂದು ಮದುವೆಯಾಗಿದ್ದರು. ಈ ಮಹಿಳೆಯನ್ನು ನಂಬಿಸಿ ಸುಶಾಂತ್ ಪೂಜಾರಿ ಹಂತ ಹಂತವಾಗಿ 6,60,000 ಹಣವನ್ನು ಪಡೆದುಕೊಂಡಿದ್ದನು.
ಮೋಸ ಮಾಡುವ ಉದ್ದೇಶದಿಂದ 2025ರ ನವೆಂಬರ್ 15ರಿಂದ ನಾಪತ್ತೆಯಾಗಿದ್ದನು. ನಂತರದ ದಿನಗಳಲ್ಲಿ ಈ ಬಗ್ಗೆ ಅನುಮಾನಗೊಂಡು ಆತನ ಬಗ್ಗೆ ವಿಚಾರಿಸಿದಾಗ ಇದೇ ರೀತಿ ಹಲವು ಕಡೆಗಳಲ್ಲಿ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ವಂಚಿಸಿರುವ ಹಾಗೂ ಈ ಮೊದಲು ಒಂದು ಮದುವೆ ಆಗಿರುವ ವಿಚಾರ ತಿಳಿದಿದೆ. ಹೀಗಾಗಿ ನೊಂದ ಮಹಿಳೆಯು ಕಾವೂರು ಪೊಲೀಸ್ ಠಾಣೆಯಲ್ಲಿ ಆತನ ವಿರುದ್ದ ದೂರು ನೀಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು, ಆರೋಪಿತ ಸುಶಾಂತ್ ಪೂಜಾರಿ ಯಾನೆ ಸುಶಾಂತ್ ಅಂಕುಶ್ ಪೂಜಾರಿ ಯಾನೆ ಸುಶಾಂತ್ ಜಿ ಕರ್ಕೇರಾ (32) ಎಂಬಾತನನ್ನು ಫೆ. 5 ರಂದು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಆರೋಪಿ ಆನ್ಲೈನ್ ಮದುವೆ ಪ್ಲಾಟ್ಫಾರಂ ಮೂಲಕ ಪರಿಚಯ ಮಾಡಿಕೊಂಡು ಈ ಮೊದಲು 2021ರಲ್ಲಿ ಉಡುಪಿಯ ಹುಡುಗಿಯೊಬ್ಬಳನ್ನು ಮದುವೆ ಆಗಿರುವುದು ತಿಳಿದುಬಂದಿದೆ.
ಉಡುಪಿ ಇಬ್ಬರು ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದುಕೊಂಡಿದ್ದು, ಮುಂಬೈನ ಇಬ್ಬರು ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿರುವುದು ತಿಳಿದುಬಂದಿದೆ. ಅದೇ ರೀತಿ ಬೆಂಗಳೂರಿನಲ್ಲೂ ಇಬ್ಬರು ಯುವತಿಗೆ ಮಂಕುಬೂದಿ ಎರಚಿ ಮೋಸ ಮಾಡಿದ್ದಾನೆ. ಅಲ್ಲದೆ, ಕಾರ್ಕಳದ ಓರ್ವ ಹುಡುಗಿಗೆ ಮದುವೆ ಆಗುವುದಾಗಿ ನಂಬಿಸಿ ವಂಚಿಸಿರುವುದನ್ನು ಒಪ್ಪಿಕೊಂಡಿದ್ದಾನೆ.
ಈ ಪ್ರಕರಣದಲ್ಲಿ ಆರೋಪಿತ ಸುಶಾಂತ್ ಪೂಜಾರಿಯೊಂದಿಗೆ ಮುಲ್ಕಿ ನಿವಾಸಿ ಭಾಸ್ಕರ್ ಎಂಬಾತನು ಸುಶಾಂತ್ ತನ್ನ ಅಳಿಯ ಎಂದು ಹೇಳಿಕೊಂಡು ನಂಬಿಸಿ ಆರೋಪಿತ ಸುಶಾಂತ್ ಪೂಜಾರಿಯ ಕುಟುಂಬಸ್ಥರ ಪರವಾಗಿ ಮುಂಬೈನಲ್ಲಿ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡು ಮದುವೆ ಕಾರ್ಯಗಳನ್ನು ನೆರವೇರಿಸಿದ್ದ. ಈ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ : ಟಿ20 ವಿಶ್ವಕಪ್ | ಅಭ್ಯಾಸದಿಂದ ದೂರ ಉಳಿದ ಅಭಿಷೇಕ್ ಶರ್ಮಾ.. ಸಂಜುಗೆ ಒಲಿಯಲಿದೆಯೇ ಅವಕಾಶ?



















