ಎರ್ನಾಕುಲಂ(ಕೇರಳ) : ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದಲ್ಲಿ ಈಗಾಗಲೇ ವಿಶೇಷ ತನಿಖಾ ದಳ (ಎಸ್ಐಟಿ) ವಿಚಾರಣೆಗೆ ಒಳಗಾಗಿರುವ ಹಿರಿಯ ನಟ ಹಾಗೂ ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ ‘ಕಾಂತಾರ’ದಲ್ಲಿ ನಟಿಸಿರುವ ಜಯರಾಮ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಇದೀಗ ನೋಟಿಸ್ ಜಾರಿ ಮಾಡಿದೆ. ಮುಂದಿನ ಮಂಗಳವಾರ ಕೊಚ್ಚಿ ವಲಯ ಕಚೇರಿಗೆ ಹಾಜರಾಗುವಂತೆ ಸೂಚಿಸಿದೆ. ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಜತೆ ಜಯರಾಮ್ ಅವರ ಸಂಬಂಧದ ಕುರಿತು ಮಾಹಿತಿ ಪಡೆಯುವ ಉದ್ದೇಶದಿಂದ ಈ ನೋಟಿಸ್ ಜಾರಿಯಾಗಿದೆ.
ಪ್ರಕರಣದಲ್ಲಿ ಪ್ರಮುಖ ಆರೋಪಿ ಉನ್ನಿಕೃಷ್ಣನ್ ವಿಚಾರಣೆ ನಡೆಯುತ್ತಿದ್ದು, ಈ ನಡುವೆ ಜಯರಾಮ್ ಹೇಳಿಕೆ ದಾಖಲಿಸಲು ಇ.ಡಿ ನಿನ್ನೆ ನೋಟಿಸ್ ನೀಡಿದೆ. ಎಸ್ಐಟಿ ತನಿಖೆಯಲ್ಲಿ ಉನ್ನಿಕೃಷ್ಣನ್ ಪೊಟ್ಟಿ ಜತೆಗೆ ತಮಗೆ ಯಾವುದೇ ಹಣಕಾಸಿನ ವ್ಯವಹಾರವಿಲ್ಲ ಎಂದು ಜಯರಾಮ್ ಈ ಹಿಂದೆ ಸ್ಪಷ್ಟಪಡಿಸಿದ್ದರು.
ಇದೇ ಪ್ರಕರಣದಲ್ಲಿ ಈ ಹಿಂದೆ ಜಯರಾಮ್ರನ್ನು ಅವರ ಚೆನ್ನೈ ನಿವಾಸದಲ್ಲಿ ಎಸ್ಐಟಿ ವಿಚಾರಣೆಗೆ ಒಳಪಡಿಸಿತ್ತು. ಉನ್ನಿಕೃಷ್ಣನ್ ಪೊಟ್ಟಿ ಅವರೊಂದಿಗೆ ಹಲವು ಬಾರಿ ಶಬರಿಮಲೆ ದೇಗುಲ ಹಾಗೂ ಅವರ ಮನೆಯಲ್ಲಿ ನಡೆಸಿದ್ದ ಹಲವು ಪೂಜೆಗಳ ಕುರಿತು ಪ್ರಶ್ನಿಸಲಾಗಿತ್ತು.
ಕೊಟ್ಟಾಯಂ ಎಳಂಪಲ್ಲಿ ದೇವಸ್ಥಾನಕ್ಕೆ ಬಾಗಿಲಿನ ಚೌಕಟ್ಟು (ಕಟ್ಟಿಲಪ್ಪಲಿ) ಪ್ರತಿಷ್ಠಾಪನೆ ಸಮಾರಂಭ ಹಾಗೂ ಬಾಗಿಲಿನ ಫಲಕಗಳ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗಿ ಜಯರಾಮ್ ಹೇಳಿದ್ದರು. ಆದರೆ, ಪೊಟ್ಟಿ ಜತೆಗೆ ಯಾವುದೇ ಹಣಕಾಸಿನ ವ್ಯವಹಾರದಲ್ಲಿ ಭಾಗಿಯಾಗಿಲ್ಲ ಎಂದಿದ್ದರು. ಈ ಹೇಳಿಕೆಯ ಆಧಾರದ ಮೇಲೆ ತನಿಖಾ ತಂಡ ಪ್ರಕರಣದಲ್ಲಿ ಜಯರಾಮ್ ಅವರನ್ನು ಸಾಕ್ಷಿಯಾಗಿಸಿತ್ತು.
ಇದನ್ನೂ ಓದಿ : ಭಾರತದ ವಿರುದ್ಧದ ಕಾದಾಟದ ಬಗ್ಗೆ ಅನಿಶ್ಚಿತತೆ | ‘ಸರ್ಕಾರದ ನಿರ್ಧಾರಕ್ಕೆ ಬದ್ಧ’ ಎಂದ ಪಾಕ್ ಬೌಲರ್ ಸಲ್ಮಾನ್ ಮಿರ್ಜಾ



















