ಬೆಂಗಳೂರು: ಗೃಹ ಬಳಕೆಯ ಗ್ಯಾಸ್ ಲೀಕ್‌ನಿಂದ ಮನೆಗೆ ಬೆಂಕಿ ಹೊತ್ತಿಕೊಂಡ ಘಟನೆ ಟಿ.ಸಿ.ಪಾಳ್ಯ, ವಾರಣಾಸಿ ಸಮೀಪದ ಸನ್ನಿ ಲೇಔಟ್‌ನಲ್ಲಿ ಸಂಭವಿಸಿದೆ.
ಅಗ್ನಿ ಅವಘಡದಲ್ಲಿ ವೆಂಕಟೇಶ್ ಹಾಗೂ ಪೂರ್ಣಿಮಾ ಎಂಬುವವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಸ್ಥಳದಲ್ಲಿ ಒಟ್ಟು ಎರಡು ಮಹಡಿಯ ಕಟ್ಟಡವಿದ್ದು, ಮೊದಲ ಮಹಡಿಯಲ್ಲಿ ಮನೆಯ ಮಾಲೀಕ ಪೂರ್ಣಿಮಾ ವಾಸವಿದ್ದರು. ಎರಡನೇ ಮಹಡಿಯಲ್ಲಿ ಎರಡು ಮನೆಗಳಿದ್ದು, ಬೆಂಕಿ ಬಿದ್ದ ಮನೆಗೆ ಸಂಬಂಧಿಸಿದ ಬಾಡಿಗೆದಾರರು ಕೆಲಸಕ್ಕೆ ತೆರಳಿದ್ದ ಕಾರಣ ಮನೆಯೊಳಗೆ ಯಾರೂ ಇರಲಿಲ್ಲ.
ಈ ವೇಳೆ ಗ್ಯಾಸ್ ಲೀಕೆಜ್‌ನಿಂದ ವಾಸನೆ ಬರುತ್ತಿರುವುದನ್ನು ಗಮನಿಸಿದ ಪಕ್ಕದ ಮನೆಯ ಬಾಡಿಗೆದಾರ ವೆಂಕಟೇಶ್, ಮನೆಯ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಮನೆಗೆ ಬಂದ ಮಾಲೀಕರು ಬಾಗಿಲು ತೆರೆದು ಲೈಟ್ ಆನ್ ಮಾಡಿದ ವೇಳೆ ಏಕಾಏಕಿ ಸ್ಫೋಟ ಸಂಭವಿಸಿ ಇಬ್ಬರೂ ಗಾಯಗೊಂಡಿದ್ದಾರೆ.
ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಕೆಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮೈಸೂರು | ಅಕ್ರಮ ಗೋವು ಸಾಗಣೆ ವಾಹನದ ಮೇಲೆ ಪೊಲೀಸರ ದಾಳಿ



















